ದಾಸವಾಳ ಹೂವುಗಳು ಎಂದರೆ ಸಾಮಾನ್ಯವಾಗಿ ಎಲ್ಲರೂ ದೇವರಿಗೆ ಪ್ರಿಯವಾದ ಹೂವು ಎಂದು ಕೊಳ್ಳುತ್ತಾರೆ. ಇಲ್ಲವೇ ಅಲಂಕಾರಕ್ಕೆ ಹೇಳಿ ಮಾಡಿಸಿದ್ದು ಎಂದು ತಿಳಿಯುತ್ತಾರೆ. ಆದರೆ ಹೂವು ಹೇಗೆ ವಿವಿಧ ಬಣ್ಣಗಳಿಂದ ಸುಂದರವಾಗಿ ಇದೆಯೋ ಹಾಗೆಯೇ ಅದರ ಉಪಯೋಗಗಳು ಕೂಡ ಬಹಳಷ್ಟಿವೆ ಎಂದು ತಿಳಿದುಕೊಂಡವರು ಬಹುಶಃ ಅಲ್ಪಸ್ವಲ್ಪ ಮಂದಿಯಷ್ಟೇ. ಹಾಗಿದ್ದರೆ ಮನೆಯ ಅಂಗಳದಲ್ಲಿ ಅರಳುವ ದಾಸವಾಳ ಎಷ್ಟು ಅನುಕೂಲಕಾರಿ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.
ಶೀತ– ವೈರಸ್ ಬಾಧೆ ದೂರ
ಶೀತ, ಕೆಮ್ಮು, ತಲೆನೋವು ಕಾಣಿಸಿದಾಗ ದಾಸವಾಳ ಹೂವನ್ನು ತಿಂದರೆ ಅಥವಾ ಅದರಿಂದ ಟೀ ಮಾಡಿ ಕುಡಿದರೆ ಈ ಸಣ್ಣ–ಪುಟ್ಟ ಸಮಸ್ಯೆಗಳಿಂದ ಪಾರಾಗಬಹುದು. ದಾಸವಾಳದಲ್ಲಿ anti oxidants ಅಧಿಕವಿರುವುದರಿಂದ ಇದು ದೇಹದಲ್ಲಿರುವ ಬೇಡದ ಕಲ್ಮಶಗಳನ್ನು ಹೊರಹಾಕಿ, ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತದೆ. ಈ ಹೂವಿನಲ್ಲಿ anti oxidants ಮತ್ತು ವಿಟಮಿನ್ ಸಿ ಅಧಿಕವಿರುವುದರಿಂದ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ.
ಮೆನೋಪಾಸ್ ಸಮಸ್ಯೆಗೆ
ಮಹಿಳೆಯರಿಗೆ ಮೆನೋಪಾಸ್ ಸಮಯದಲ್ಲಿ ಹಾಟ್ ಪ್ಲಾಷ್ ಸಮಸ್ಯೆ ಕಂಡು ಬರುತ್ತದೆ. ತುಂಬಾ ಸೆಕೆಯಾದಂತೆ ಅನಿಸುವುದು, ಮೈಯೆಲ್ಲಾ ಬೆವರುವುದು ಈ ಸಮಸ್ಯೆಯಿಂದ ಹೊರಬರಲು ಕೆಂಪು ಅಥವಾ ಬಿಳಿ ದಾಸವಾಳದ ಹೂವನ್ನು ತಿನ್ನುವುದು ಅಥವಾ ಅದರ ಟೀ ಮಾಡಿ ಕುಡಿಯುವುದು ಒಳ್ಳೆಯದು. ಕೆಲವು ಮಹಿಳೆಯರಲ್ಲಿ ಅಧಿಕ ಬಿಳುಪು ಹೋಗುವ ಸಮಸ್ಯೆ ಕಂಡು ಬರುವುದು, ಈ ಸಮಸ್ಯೆ ಇರುವವರು ದಿನ ಒಂದು ಬಿಳಿ ದಾಸವಾಳ ಹೂ ತಿಂದರೆ ಬಿಳುಪು ಹೋಗುವುದು ಕಮ್ಮಿಯಾಗುವುದು.
ವಯಸ್ಸಾಗುವುದನ್ನು ತಡೆಯುತ್ತೆ
ವಯಸ್ಸು ಹೆಚ್ಚಾಗಿ ಸೌಂದರ್ಯ ಕಮ್ಮಿಯಾಗುವುದನ್ನು ನಾವು ಯಾರೂ ಬಯಸುವುದಿಲ್ಲ, ಆದರೂ ನಾವು ಸ್ವಲ್ಪ ಆರೈಕೆ ಮಾಡಿದರೆ ಯೌವನದ ಚೆಲುವು ಬೇಗನೆ ಕಡಿಮೆಯಾಗುವುದನ್ನು ತಡೆಯಬಹುದು.
ಮೊಡವೆಗೆ ಮದ್ದು
ಮೊಡವೆ ಕಡಿಮೆ ಮಾಡಲು ದುಬಾರಿ ಚಿಕಿತ್ಸೆ ಮಾಡಿಸುತ್ತೇವೆ, ಆದರೆ ದಿನಾ ದಾಸವಾಳ ಹೂವಿನ ಜ್ಯೂಸ್ ಕುಡಿಯುವುದರಿಂದ ಮೊಡವೆ ಬರುವುದನ್ನು ತಡೆಯಬಹುದು, ಅಲ್ಲದೆ ಈ ಜ್ಯೂಸ್ ನಿಮ್ಮ ತ್ವಚೆ ಕಾಂತಿಯನ್ನೂ ಹೆಚ್ಚಿಸುತ್ತದೆ.
ದೇಹದ ನೀರಿನಂಶ
ದೇಹದಲ್ಲಿ ನೀರಿನಂಶ ಕಮ್ಮಿಯಾಗದಂತೆ ನೋಡಿಕೊಳ್ಳುತ್ತದೆ. ನೀರಿನಂಶದ ಕೊರತೆಯಿಂದ ಬಳಲುತ್ತಿರುವವರು, ಡ್ರೈ ಸ್ಕಿನ್ ಇರುವವರು ಇದರ ಜ್ಯೂಸ್ ಕುಡಿಯುವುದು ಒಳ್ಳೆಯದು. ಕೆಲವರಿಗೆ ಹೊಟ್ಟೆ ಸರಿಯಾಗಿ ಹಸಿಯುವುದಿಲ್ಲ, ಹೊಟ್ಟೆ ಹಸಿಯುತ್ತಿಲ್ಲ ಎಂದು ಊಟ ಸರಿಯಾಗಿ ಮಾಡದಿದ್ದರೆ ನಿಶ್ಯಕ್ತಿ ಉಂಟಾಗುವುದು. ಹೊಟ್ಟೆ ಹಸಿವು ಸರಿಯಾದ ರೀತಿಯಲ್ಲಿ ಆಗಲು ದಾಸವಾಳವನ್ನು ತಿನ್ನುವುದು ಒಳ್ಳೆಯದು.
ಕೂದಲುದುರುವಿಕೆಗೆ ಮದ್ದು
ಕೂದಲು ಉದುರುವುದನ್ನು ತಡೆಯುವ ಉತ್ತಮ ಮನೆ ಮದ್ದು ಇದಾಗಿದೆ. ಎಣ್ಣೆಯಲ್ಲಿ ದಾಸವಾಳ ಹೂವನ್ನು ಹಾಕಿ ಕಾಯಿಸಿ, ಆ ಎಣ್ಣೆಯನ್ನು ಬಳಸಿದರೆ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಕೂದಲು ಉದುರುವುದನ್ನು ತಡೆಯುವುದು ಮಾತ್ರವಲ್ಲ, ಪ್ರತೀದಿನ ಈ ಎಣ್ಣೆ ಹಚ್ಚಿದರೆ ಕಪ್ಪಾದ ಕೂದಲಿನ ಸೌಂದರ್ಯ ನಿಮ್ಮದಾಗುವುದು.
ಈ ಹೂವಿನಿಂದ ತೆಗೆದ ರಸ ಕೂದಲಿಗೆ ಹೊಳಪು ನೀಡಿ ಉತ್ತಮ ಕಂಡೀಶನರ್ ನಂತೆ ವರ್ತಿಸುತ್ತದೆ. ತಲೆಹೊಟ್ಟು ನಿವಾರಿಸಿ, ಇದು ಕೂದಲಿಗೆ ಕಪ್ಪು ಬಣ್ಣ ನೀಡುತ್ತದೆ. ದಾಸವಾಳ ಎಲೆಯ ಲೋಳೆ ತಲೆಗೆ ಬಳಸುವುದರಿಂದ ಕೂದಲು ಪಳಫಳ. ಸ್ವಲ್ಪ ತೆಂಗಿನೆಣ್ಣೆಗೆ 7-8 ಬಿಳಿ ದಾಸವಾಳದ ಎಲೆ ಹಾಕಿ ಕಾಯಿಸಿ ತಣಿಸಿ ಕೂದಲಿಗೆ ಹಚ್ಚಿ ನಂತರ ಸ್ನಾನ ಮಾಡಿದರೆ ಕೂದಲು ಸ್ಮೂತ್ ಆಗಿ ಹೊಳಪು ಬರುತ್ತದೆ.
ದೇಹಕ್ಕೆ ತಂಪು ತಂಪು
ಬಾಡಿ ಹೀಟ್ ಆಗಿದ್ದರೆ ಅದನ್ನು ಕಮ್ಮಿ ಮಾಡಲು ದಾಸವಾಳ ಹೂವಿನ ಜ್ಯೂಸ್ ಕುಡಿದರೆ ಒಳ್ಳೆಯದು. ದಾಸವಾಳದ ರಸ ದೇಹದ ಉಷ್ಣತೆಯನ್ನು ಕಡಿಮೆಮಾಡುತ್ತದೆ, ಅದರಲ್ಲೂ ಬಿಳಿ ಬಣ್ಣದ ದಾಸವಾಳದಲ್ಲಿ ತಂಪು ನೀಡುವ ಅಂಶ ಹೆಚ್ಚಿರುವುದರಿಂದ, ಅದು ಕಣ್ಣುಗಳನ್ನು ಆಯಾಸದಿಂದ ಮುಕ್ತವಾಗಿರಿಸಿ, ತಂಪನ್ನು ನೀಡುತ್ತದೆ.
ಕ್ಯಾನ್ಸರ್ ದೂರ
ದಾಸವಾಳ ಹೂವಿನಲ್ಲಿರುವ anti oxidants ಗುಣ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ. ದಾಸವಾಳ ಹೂವಿನ ಟೀ ಮಾಡಿ ಕುಡಿಯುವುದು ತುಂಬಾ ಒಳ್ಳೆಯದು. ಬಿಳಿ ದಾಸವಾಳ ಎಲ್ಲಕ್ಕಿಂತ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದೆ. ಹೂವುಗಳನ್ನು ಬೇವಿನ ಮರದ ಅಡಿಯಲ್ಲಿ (ನೆರಳಿನಲ್ಲಿ) ಒಣಗಿಸಬೇಕು. ನಂತರ ಇದನ್ನು ಪುಡಿ ಮಾಡಿ ಸೇವಿಸಿದರೆ ಎಲ್ಲ ಬಗೆಯ ಕ್ಯಾನ್ಸರ್ಗಳಿಗೆ ಉಪಶಮನಕಾರಿ.
ಹೃದಯ ಸಮಸ್ಯೆಗೆ ಪರಿಹಾರ
ಹೃದಯ ಸಂಬಂಧಿ ತೊಂದರೆಗಳಿಗೆ ದಾಸವಾಳ ಹೂವಿನ ನೈಸರ್ಗಿಕ ಅಂಶ ಪರಿಣಾಮಕಾರಿ. ಈ ಹೂವಿನ ರಸದ ಕಷಾಯವನ್ನು ಕುಡಿದರೆ ದೇಹದಲ್ಲಿನ ಅತಿಯಾದ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುತ್ತದೆ. ದೇಹದಲ್ಲಿರುವ ಅನಗತ್ಯ ಬೊಜ್ಜನ್ನು ಕರಗಿಸುವಲ್ಲಿ ದಾಸವಾಳ ಹೆಚ್ಚು ಪ್ರಯೋಜನ. ದಾಸವಾಳದ ಹೂವಿನ ಟೀ ಮಾಡಿ ಕುಡಿದರೆ ಅಥವಾ ಅದರ ರಸವನ್ನು ಸೇವಿಸಿದರೆ,
ಹೃದಯ ಸ್ತಂಭನಕ್ಕೆ ಕಾರಣವಾಗುವ, ರಕ್ತದಲ್ಲಿ ಸೇರಿಕೊಂಡ ಅನಗತ್ಯ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಈ ಮೂಲಕ ಹೃದಯ ಸ್ತಂಭನದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್ ಸಮಸ್ಯೆಯನ್ನು ಕಮ್ಮಿ ಮಾಡಬೇಕೆಂದು ಬಯಸುವುದಾದರೆ ದಿನಾ ಒಂದರಿಂದ ಎರಡು ದಾಸವಾಳದ ಹೂವನ್ನು ತಿನ್ನುವುದು ಒಳ್ಳೆಯದು.
ಮಧುಮೇಹ, ಕಿಡ್ನಿ ಸಮಸ್ಯೆ
ಮಧುಮೇಹ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ದಾಸವಾಳದ ರಸವನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ಜೀರ್ಣಕ್ರಿಯೆ ಸಮರ್ಪಕವಾಗಿ ನಡೆಯಲು ದಾಸವಾಳ ಹೂವು ಸಹಕಾರಿ. ಹೀಗಾಗಿಯೇ ಹವಾಯಿ ದ್ವೀಪದ ಜನರು ಹೂಗಳನ್ನು ನೇರವಾಗಿ ತಿಂದರೆ, ಚೀನಾದವರು ಉಪ್ಪಿನಕಾಯಿ ಮಾಡಿಕೊಂಡು ಸೇವಿಸುತ್ತಾರೆ.
ರಕ್ತಹೀನತೆಗೆ ಉಪಚಾರ
ಕೆಂಪು ದಾಸವಾಳದ ಹೂವು ನೈಸರ್ಗಿಕವಾಗಿ ರಕ್ತದ ಬಣ್ಣವನ್ನು ಹೆಚ್ಚಿಸುತ್ತದೆ. ರಕ್ತಹೀನತೆಯಿಂದ ಬಳಲುತ್ತಿದ್ದವರಿಗೆ ಇದು ಪರಿಣಾಮಕಾರಿ ಔಷಧಿ.
ಚರ್ಮದ ಆರೈಕೆ
ದಾಸವಾಳ ಹೂವಿನ ತೈಲದ ಬಳಕೆಯಿಂದ ಚರ್ಮಕ್ಕೆ ಹೊಳಪು ಬರುತ್ತದೆ. ಹೂವು ಹಾಗೂ ಎಲೆಗಳನ್ನು ಒಣಗಿಸಿ, ಸುಟ್ಟ ಬಳಿಕ ಸಿಗುವ ಬೂದಿಯನ್ನು ಹಚ್ಚಿದರೆ, ಕಣ್ಣಹುಬ್ಬುಗಳು ಹೊಳಪು ಪಡೆಯುತ್ತವೆ. ಈ ಸಸ್ಯದ ಬೇರುಗಳನ್ನು ಎಣ್ಣೆಯಲ್ಲಿ ಹಾಕಿ, ಬೇರಿನಲ್ಲಿರುವ ನೀರಿನ ಅಂಶ ಆವಿಯಾಗುವವರೆಗೂ ಕುದಿಸಬೇಕು. ಗಾಯಗಳಿಗೆ ಈ ಎಣ್ಣೆ ಲೇಪಿಸಿದರೆ ಗುಣಮುಖವಾಗುತ್ತದೆ.