ಅಹಮಾದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಭಾನುವಾರ ನಡೆದಿದ್ದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.
2021ರ ಐಪಿಎಲ್ ಟೂರ್ನಿಯ ಬಳಿಕ ಹಾರ್ದಿಕ್ ಪಾಂಡ್ಯ 2022ರ ಟೂರ್ನಿಗೆ ಗುಜರಾತ್ ಟೈಟನ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು. ಆ ಮೂಲಕ ಚೊಚ್ಚಲ ಆವೃತ್ತಿಯಲ್ಲಿಯೇ ಗುಜರಾತ್ ತಂಡವನ್ನು ಹಾರ್ದಿಕ್ ಚಾಂಪಿಯನ್ ಮಾಡಿದ್ದರು ಹಾಗೂ 2023ರಲ್ಲಿ ರನ್ನರ್ ಅಪ್ ಮಾಡಿದ್ದರು. ಆದರೆ, ಇದೀಗ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ್ದಾರೆ. ಆದರೆ, ಟಾಸ್ಗೆ ಆಗಮಿಸುತ್ತಿರುವಾಗ ಹಾರ್ದಿಕ್ ಪಾಂಡ್ಯ ಅವರನ್ನು ‘ರೋಹಿತ್…ರೋಹಿತ್’ ಎಂದು ಕರೆಯುವ ಮೂಲಕ ಫ್ಯಾನ್ಸ್ ರೇಗಿಸಿದ್ದಾರೆ.
ತಮ್ಮ ಮಾಜಿ ತಂಡ ಗುಜರಾತ್ ಟೈಟನ್ಸ್ ನೂತನ ನಾಯಕ ಶುಭಮನ್ ಗಿಲ್ ಅವರ ಜೊತೆ ಟಾಸ್ಗೆ ಪಿಚ್ ಬಳಿ ನಡೆದುಕೊಂಡು ಬರುತ್ತಿದ್ದಾಗ, ರೊಚ್ಚಿಗೆದ್ದ ಅಭಿಮಾನಿಗಳು ರೋಹಿತ್…ರೋಹಿತ್..ರೋಹಿತ್… ಎಂದು ಜೋರಾಗಿ ಕೂಗುವ ಮೂಲಕ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೋಲ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮುಂಬೈ ನಾಯಕನಿಗೆ ಕಸಿವಿಸಿಯಾಯಿತು ಹಾಗೂ ಅಸಮಾಧಾನದೊಂದಿಗೆ ಟಾಸ್ಗೆ ತೆರಳಿದರು.