RCBಗೆ ಪ್ಲೇಆಫ್ ಪ್ರವೇಶಿಸಲು ಇನ್ನೂ ಅವಕಾಶ ಇದೆ. ಆಡಿರುವ 8 ಪಂದ್ಯಗಳಲ್ಲಿ ಆರ್ಸಿಬಿ ತಂಡ ಜಯ ಸಾಧಿಸಿರುವುದು ಕೇವಲ 1 ಮ್ಯಾಚ್ನಲ್ಲಿ ಮಾತ್ರ. ಅಲ್ಲದೆ 7 ಸೋಲುಗಳೊಂದಿಗೆ ಇದೀಗ ಅಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.
ಕೋಲ್ಕತ್ತಾ ವಿರುದ್ಧ ಸೋತರೂ ವಿಶ್ವ ದಾಖಲೆ ಬರೆದ RCB!
ಇದಾಗ್ಯೂ ಆರ್ಸಿಬಿ ತಂಡ ಪ್ಲೇಆಫ್ ರೇಸ್ನಿಂದ ಹೊರಬಿದ್ದಿಲ್ಲ ಎಂಬುದು ವಿಶೇಷ. ಅಂದರೆ ಉಳಿದ 6 ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಫಾಫ್ ಪಡೆಗೆ ಪ್ಲೇಆಫ್ ಪ್ರವೇಶಿಸುವ ಅವಕಾಶವನ್ನು ಸೃಷ್ಟಿಸಿಕೊಳ್ಳಬಹುದು. ಹೀಗಾಗಿ ಇನ್ನೊಂದಷ್ಟು ಪಂದ್ಯಗಳವರೆಗೆ ಆರ್ಸಿಬಿ ತಂಡದ ಪ್ಲೇಆಫ್ ಆಸೆ ಜೀವಂತವಿರಲಿದೆ.
ಅಂದರೆ ಇಲ್ಲಿ ಯಾವುದೇ ತಂಡ ಪ್ಲೇಆಫ್ ಹಂತಕ್ಕೇರಿಲ್ಲ. ಐಪಿಎಲ್ನಲ್ಲಿ 16 ಅಂಕಗಳನ್ನು ಪಡೆದ ತಂಡಗಳು ಪ್ಲೇಆಫ್ ಪ್ರವೇಶಿಸುವುದನ್ನು ಖಚಿತ ಪಡಿಸಲಿದೆ. ಇಲ್ಲಿ ರಾಜಸ್ಥಾನ್ ರಾಯಲ್ಸ್ 12 ಅಂಕಗಳನ್ನು ಪಡೆದಿದ್ದರೆ, ಕೆಕೆಆರ್ ಮತ್ತು ಎಸ್ಆರ್ಹೆಚ್ ತಂಡಗಳು ತಲಾ 8 ಅಂಕಗಳನ್ನು ಹೊಂದಿದೆ.
ಈ ಮೂರು ತಂಡಗಳು ಮುಂದಿನ ಪಂದ್ಯಗಳ ಮೂಲಕ 16 ಅಂಕಗಳನ್ನು ಸಂಪಾದಿಸಿ ಪ್ಲೇಆಫ್ ಹಂತಕ್ಕೇರುವ ಸಾಧ್ಯತೆ ಹೆಚ್ಚಿದೆ. ಇನ್ನು ನಾಲ್ಕನೇ ತಂಡ 16 ಅಂಕಗಳನ್ನು ಪಡೆಯುವರೆಗೆ ಆರ್ಸಿಬಿ ತಂಡಕ್ಕೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಇರಲಿದೆ.
ಸಾಮಾನ್ಯವಾಗಿ ಟಾಪ್-3 ತಂಡಗಳು 16 ಅಂಕಗಳನ್ನು ಕಲೆಹಾಕಿದರೆ 4ನೇ ಸ್ಥಾನದಲ್ಲಿ ಕಾಣಿಸಿಕೊಳ್ಳುವ ತಂಡವು 14 ಪಾಯಿಂಟ್ಸ್ನೊಂದಿಗೆ ಪ್ಲೇಆಫ್ಗೆ ಪ್ರವೇಶಿಸುವ ಸಾಧ್ಯತೆ ಹೆಚ್ಚು. ಇತ್ತ ಆರ್ಸಿಬಿ ತಂಡವು ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದರೆ ಒಟ್ಟು 14 ಅಂಕಗಳನ್ನು ಸಂಪಾದಿಸಬಹುದು.
ಈ ಮೂಲಕ ಲೀಗ್ ಹಂತದ ಮುಕ್ತಾಯದ ವೇಳೆಗೆ ಉತ್ತಮ ನೆಟ್ ರನ್ ರೇಟ್ನೊಂದಿಗೆ ನಾಲ್ಕನೇ ಸ್ಥಾನದೊಂದಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶವನ್ನು ಎದುರು ನೋಡಬಹುದು. ಅದರಂತೆ ಅಗ್ರ ನಾಲ್ಕು ತಂಡಗಳು 16 ಅಂಕಗಳನ್ನು ಗಳಿಸುವವರೆಗೆ ಆರ್ಸಿಬಿ ತಂಡದ ಪ್ಲೇಆಫ್ ಆಸೆ ಜೀವಂತವಿರಲಿದೆ. ಹೀಗಾಗಿ ಮುಂಬರುವ ಪಂದ್ಯಗಳ ಮೂಲಕ ಆರ್ಸಿಬಿ ಪ್ಲೇಆಫ್ ಪ್ರವೇಶಿಸಿದರೂ ಅಚ್ಚರಿಪಡಬೇಕಿಲ್ಲ.