ಟೀಮ್ ಇಂಡಿಯಾ ಕ್ಯಾಪ್ಟನ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಮನಮೋಹಕ ಲಯದಲ್ಲಿದ್ದಾರೆ. ಭಾನುವಾರನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮನಮೋಹಕ ಬ್ಯಾಟಿಂಗ್ ನಡೆಸಿದ ಹಿಟ್ಮ್ಯಾನ್ ಖ್ಯಾತಿಯ ಅನುಭವಿ ಆರಂಭಿಕ ಬ್ಯಾಟರ್ ಕೇವಲ 61 ಎಸೆತಗಳಲ್ಲಿ ಶತಕ ಬಾರಿಸಿದರು. ದುರದೃಷ್ಟವಶಾತ್ ರೋಹಿತ್ ಶರ್ಮಾ ಶತಕದ ಹೊರತಾಗಿಯೂ ಮುಂಬೈ ಇಂಡಿಯನ್ಸ್ 20 ರನ್ಗಳ ಸೋಲನುಭವಿಸಿತು.
ಗೆಲುವಿಗೆ 207 ರನ್ಗಳ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ಒಂದು ಹಂತದಲ್ಲಿ ಸುಲಭವಾಗಿ ಗೆಲುವಿನ ದಡ ಮುಟ್ಟುವ ಸುಳಿವು ನೀಡಿತ್ತು. ಆದರೆ, ಇನಿಂಗ್ಸ್ ಮಧ್ಯದಲ್ಲಿ ಸತತ ವಿಕೆಟ್ ಕೈಚೆಲ್ಲಿದರ ಪರಿಣಾಮ ಕೊನೆಗೆ ಗೆಲುವಿನ ದಡ ಮುಟ್ಟಲು ವಿಫಲವಾಯಿತು. ರೋಹಿತ್ ಶರ್ಮಾ 63 ಎಸೆತಗಳಲ್ಲಿ 105 ರನ್ ಬಾರಿಸಿ ಔಟಾಗದೇ ಉಳಿದರು. ಅವರ ಈ ಮನಮೋಹಕ ಇನಿಂಗ್ಸ್ನಲ್ಲಿ 11 ಫೋರ್ ಮತ್ತು 5 ಸಿಕ್ಸರ್ಗಳು ಮೂಡಿಬಂದವು. ಈ ಸಿಕ್ಸರ್ಗಳ ಮೂಲಕ ರೋಹಿತ್ ವಿಶೇಷ ದಾಖಲೆ ಒಂದನ್ನು ಬರೆದಿದ್ದಾರೆ.
ಟಿ20 ಕ್ರಿಕೆಟ್ ಇತಿಹಾಸದಲ್ಲಿ 500 ಸಿಕ್ಸರ್ಗಳ ದಾಖಲೆಯನ್ನು ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆ ಈಗ ರೋಹಿತ್ ಶರ್ಮಾ ಅವರದ್ದು. ನಾಗ್ಪುರದಲ್ಲಿ ಜನಿಸಿದ ಬಲಗೈ ಬ್ಯಾಟರ್ ಸಿಎಸ್ಕೆ ವಿರುದ್ಧದ ಪಂದ್ಯಕ್ಕೂ ಮುನ್ನ ಟಿ20 ಕೆರಿಯರ್ನಲ್ಲಿ ಒಟ್ಟು 497 ಸಿಕ್ಸರ್ಗಳನ್ನು ಬಾರಿಸಿದ್ದರು.
ಇನಿಂಗ್ಸ್ನ 11ನೇ ಓವರ್ನಲ್ಲಿ ಸಿಎಸ್ಕೆ ಸ್ಪಿನ್ನರ್ ರವೀಂದ್ರ ಜಡೇಜಾ ಎದುರು ಸ್ಲಾಗ್ ಸ್ವೀಪ್ ಮೂಲಕ ಸಿಕ್ಸರ್ ಬಾರಿಸಿ ಅವರು 500 ಸಿಕ್ಸರ್ಗಳ ಗಡಿ ದಾಟಿದರು. ಚುಟುಕು ಕ್ರಿಕೆಟ್ನಲ್ಲಿಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ದಿಗ್ಗಜರಾದ ಕ್ರಿಸ್ ಗೇಲ್, ಆಂಡ್ರೆ ರಸೆಲ್ ಮತ್ತು ಕೈರೊನ್ ಪೊಲಾರ್ಡ್ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.