ನವದೆಹಲಿ:- ಇಂದು ದೇಶದೆಲ್ಲೆಡೆ 76ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಭಾರತೀಯರ ಹೆಮ್ಮೆಯ ದಿನವಾದ ಇಂದು ನವದೆಹಲಿಯಲ್ಲಿ ಈಗಾಗಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ಮಾಡಿದರು.
ದೆಹಲಿಯ ಕರ್ತವ್ಯಪಥದಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್ನಲ್ಲಿ 3 ಸೇನಾಪಡೆಗಳ ಜಂಟಿ ಸ್ತಬ್ಧಚಿತ್ರವನ್ನು ಪ್ರದರ್ಶನ ಮಾಡಲಾಗಿದೆ.. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಥೀಮ್ನ್ನು ಈ ಜಂಟಿ ಸ್ತಬ್ಧಚಿತ್ರ ಒಳಗೊಂಡಿತ್ತು. ಜಂಟಿ ಆಪರೇಷನ್ ಕೊಠಡಿ, ಅರ್ಜುನ್ ಟ್ಯಾಂಕರ್, ತೇಜಸ್, ಐಎನ್ಎಸ್ ವಿಶಾಖಪಟ್ಟಣ ನೌಕೆ ಮಾದರಿಯನ್ನು ಹೊಂದಿದೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ಹೆಚ್ಚಿನ ಪ್ರಮಾಣದಲ್ಲಿ ಆಹ್ವಾನಿಸುತ್ತಿದೆ. ಈ ಬಾರಿಯಂತೂ 10,000 ಮಂದಿಯನ್ನು ಆಹ್ವಾನಿಸಿದ್ದು, ಈ ಬಾರಿಯ ಕಾರ್ಯಕ್ರಮವನ್ನು ಜನಭಾಗೀದಾರಿ ಎಂದು ಕರೆದಿದೆ.
ಈ ಬಾರಿ ಗಣರಾಜ್ಯೋತ್ಸವ ಪರೇಡ್ನಲ್ಲಿ ಒಟ್ಟು 31 ಸ್ತಬ್ಧಚಿತ್ರಗಳನ್ನು ಪ್ರದರ್ಶನ ಮಾಡಲಾಗಿದೆ. ಪಥ ಸಂಚಲನದಲ್ಲಿ ಗದಗ ಜಿಲ್ಲೆ ಲಕ್ಕುಂಡಿಯ ಶಿಲ್ಪ ಕಲೆಯನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರ ಕರ್ನಾಟಕವನ್ನು ಪ್ರತಿನಿಧಿಸಲಿದೆ. ಇದೇ ಮೊದಲ ಬಾರಿಗೆ ಕರ್ತವ್ಯಪಥದಲ್ಲಿ ಡಿಆರ್ಡಿಒ ನಿರ್ಮಾಣ ಮಾಡಿರುವ ಯುದ್ಧತಂತ್ರ ಕ್ಷಿಪಣಿ ಪ್ರಳಯ್ ಹಾಗೂ ಸೇನೆಯ ಕಣ್ಗಾವಲು ವ್ಯವಸ್ಥೆ ಸಂಜಯ್ ಕ್ಷಿಪಣಿ ಗಳನ್ನು ಪ್ರದರ್ಶನ ಮಾಡಲಾಗಿದೆ.
ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ ಈ ಬಾರಿಯ ಗಣರಾಜ್ಯೋತ್ಸವ ಪರೇಡನ್ನು ಆಯೋಜನೆ ಮಾಡಲಾಗಿತ್ತು. ಇದಲ್ಲದೆ ಪ್ರತೀ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಿಂದ ಒಂದು ಜೋಡಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಉಡುಪುಗಳನ್ನು ಧರಿಸಿ ಭಾಗಿಯಾಗಿದ್ದಾರೆ. ಕರ್ತವ್ಯಪಥ ದಲ್ಲಿ ಭಾಗಿಯಾಗುವ ಕಲಾ ತಂಡಗಳು ಸಹ ಸಂಸ್ಕೃತಿಯನ್ನು ಬಿಂಬಿಸುವಂತೆ ಉಡುಪುಗಳನ್ನು ಧರಿಸಿ ಭಾಗಿಯಾಗಿದ್ದರು.