ನವದೆಹಲಿ: ವಾಹನಗಳಲ್ಲಿ ಅಳವಡಿಕೆ ಮಾಡಿರುವ ಫಾಸ್ಟ್ ಟ್ಯಾಗ್ ಸಂಬಂಧ ಹೊಸ ಅಪ್ಡೇಟ್ ಒಂದು ಹೊರ ಬಿದ್ದಿದೆ. ಎಲ್ಲ ರೀತಿಯ ಫಾಸ್ಟ್ ಟ್ಯಾಗ್ಗಳ ಕೆವೈಸಿ (KYC) ಆಗಿರಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿದೆ. ಜನವರಿ 31ರ ಒಳಗೆ ಫಾಸ್ಟ್ ಟ್ಯಾಗ್ಗಳ ಕೆವೈಸಿ ಪೂರ್ಣಗೊಳಿಸಲು ಡೆಡ್ ಲೈನ್ ನೀಡಲಾಗಿದೆ.
ಒಂದು ವೇಳೆ ಜನವರಿ 31ರ ಒಳಗೆ ನಿಮ್ಮ ವಾಹನದ ಫಾಸ್ಟ್ ಟ್ಯಾಗ್ನ ಕೆವೈಸಿ ಪೂರ್ಣಗೊಳಿಸದೇ ಇದ್ದರೆ ಅಂಥಾ ಫಾಸ್ಟ್ ಟ್ಯಾಗ್ಗಳನ್ನು ರದ್ದು ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಒಂದು ವೇಳೆ ನಿಮ್ಮ ವಾಹನದ ಫಾಸ್ಟ್ ಟ್ಯಾಗ್ನ ಕೆವೈಸಿ ಮಾಡಿಸದೆ ಅದು ಜನವರಿ 31ರ ಬಳಿಕ ರದ್ದಾದರೆ ಟೋಲ್ ಬೂತ್ಗಳಲ್ಲಿ ಶುಲ್ಕ ಪಾವತಿ ಮಾಡುವಾಗ ತೊಂದರೆ ಎದುರಾಗಲಿದೆ.
ಕೆವೈಸಿ ಆಗಿದೆಯೋ? ಇಲ್ಲವೋ? ಪರಿಶೀಲನೆ ಹೇಗೆ?
ವಾಹನ ಚಾಲಕರು, ಫಾಸ್ಟ್ ಟ್ಯಾಗ್ ಗ್ರಾಹಕರು ಸಂಬಂಧಪಟ್ಟ ಬ್ಯಾಂಕ್ ಸಂಪರ್ಕಿಸಿ ತಮ್ಮ ಪಾಸ್ಟ್ ಟ್ಯಾಗ್ನ ಕೆವೈಸಿ ಮಾಡಿಸಬಹುದು. ಇಲ್ಲವಾದರೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಟೋಲ್ ಬೂತ್ಗಳಲ್ಲೂ ಈ ಕುರಿತು ಮಾಹಿತಿ ಪಡೆಯಬಹುದಾಗಿದೆ.
ಫಾಸ್ಟ್ ಟ್ಯಾಗ್ ಕೆವೈಸಿ ಏಕೆ ಮುಖ್ಯ?
ವಾಹನಗಳಲ್ಲಿ ಬಳಕೆಯಾಗುವ ಎಲ್ಲ ಫಾಸ್ಟ್ ಟ್ಯಾಗ್ಗಳ ಕೆವೈಸಿ ಪೂರ್ಣ ಆಗಿರಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿದೆ. ಒಂದೇ ಫಾಸ್ಟ್ ಟ್ಯಾಗ್ ಅನ್ನು ಹಲವು ವಾಹನಗಳಿಗೆ ಬಳಕೆ ಮಾಡೋದನ್ನು ತಡೆಯಲು ಇದು ಅತ್ಯಗತ್ಯವಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ನ ಮಾರ್ಗಸೂಚಿಗಳ ಪ್ರಕಾರ ಫಾಸ್ಟ್ ಟ್ಯಾಗ್ ಬಳಕೆದಾರರು ತಮ್ಮ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸೋದು ಅತ್ಯಗತ್ಯ. ಜೊತೆಗೆ ಇದು ಕಡ್ಡಾಯ ಕೂಡಾ. ಒಂದು ವೇಳೆ ಜನವರಿ 31ರ ಒಳಗೆ ಕೆವೈಸಿ ಪೂರ್ಣಗೊಳಿಸದೆ ಇದ್ದರೆ ನಿಮ್ಮ ಫಾಸ್ಟ್ ಟ್ಯಾಗ್ ಖಾತೆಯಲ್ಲಿ ಸಾಕಷ್ಟು ಹಣ ಇದ್ದರೂ ಕೂಡಾ ಕೆವೈಸಿ ಅಪೂರ್ಣವಾದ ಕಾರಣ ಬ್ಯಾಂಕ್ನಿಂದ ಫಾಸ್ಟ್ ಟ್ಯಾಗ್ ನಿಷ್ಕ್ರಿಯ ಆಗಲಿದೆ.
ಒಂದು ವಾಹನ – ಒಂದು ಫಾಸ್ಟ್ ಟ್ಯಾಗ್ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ. ಇದೇ ನೀತಿಯನ್ನು ಜನರೂ ಕೂಡಾ ಪಾಲನೆ ಮಾಡಬೇಕಿದೆ. ಹೀಗಾಗಿ, ಹಿಂದೆ ತೆಗೆದುಕೊಂಡಿದ್ದ ಎಲ್ಲ ಫಾಸ್ಟ್ ಟ್ಯಾಗ್ಗಳನ್ನೂ ತ್ಯಜಿಸಬೇಕಿದೆ. ಒಂದು ವೇಳೆ ಹೀಗೆ ಮಾಡದಿದ್ದರೆ ಹಾಗೂ ಫಾಸ್ಟ್ ಟ್ಯಾಗ್ ಕೆವೈಸಿ ಮಾಡಿಸದೇ ಇದ್ದರೆ ಫಾಸ್ಟ್ ಟ್ಯಾಗ್ ಸ್ಥಗಿತ ಆಗಲಿದೆ.