ಪಾಪ ಸಣ್ಣ ಸಣ್ಣ ಇರುವೆಗಳು ಏನು ಮಾಡುತ್ತದೆ ಎಂದು ಕೆಲವೊಮ್ಮೆ ನಮಗೆ ಅನಿಸುತ್ತದೆ. ಇದು ನಿಜ. ಆದರೆ ಒಂದು ಇರುವೆ ಏನೂ ಮಾಡಲ್ಲವೆಂದು ಅಂದುಕೊಂಡರೂ ಅದರ ಸೈನ್ಯವನ್ನೇ ಕಟ್ಟಿಕೊಂಡು ಬಂದಾಗ ನಮಗೆ ತೊಂದರೆ ಇಲ್ಲದಿಲ್ಲ. ಅದರಲ್ಲೂ ಅಡುಗೆ ಮನೆಯಲ್ಲಿ ಇರುವೆಗಳಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ.
ಸಿಹಿ ಪದಾರ್ಥ ಹಾಗೂ ಇತರ ಸಾಮಗ್ರಿಗಳನ್ನು ಅದು ಸುತ್ತಿಕೊಳ್ಳುತ್ತದೆ. ಇದರಿಂದ ಅಡುಗೆ ಮಾಡುವುದೇ ಕಷ್ಟವಾಗಬಹುದು. ಇನ್ನು ಕೆಲವೊಮ್ಮೆ ಮಾಡಿಟ್ಟ ಬಿಸಿ ಅಡುಗೆಯ ಮುಚ್ಚಲ ಸ್ವಲ್ಪ ತೆರೆದಿದ್ದರೂ ಇರುವೆಗಳು ಅಲ್ಲಿಗೆ ದಾಳಿ ಮಾಡುತ್ತವೆ. ಇರುವೆ ಹಾಗೂ ಇನ್ನಿತರ ಕೀಟಗಳನ್ನು ಓಡಿಸಲು ನೀವು ಬಳಸಬಹುದಾದ ಮದ್ದಿನ ಬಗ್ಗೆ ಗಮನಹರಿಸಿ.
ದಾಲ್ಚಿನ್ನಿ
ದಾಲ್ಚಿನ್ನಿ ಪುಡಿ ಖಾರವಾಗಿರುವ ಜೊತೆಗೇ ಗಾಳಿಯಲ್ಲಿ ಘಾಟು ಪರಿಮಳವನ್ನೂ ಬೀರುತ್ತದೆ. ಈ ಘಾಟನ್ನು ಇರುವೆಗಳು ಸಹಿಸುವುದಿಲ್ಲ. ಹಾಗಾಗಿ, ಈ ಘಾಟು ಇಲ್ಲವಾಗುವವರೆಗೂ ಇರುವೆಗಳು ಇತ್ತ ಸುಳಿಯಲಾರವು. ನಿಮ್ಮ ಮನೆಯ ಬಟ್ಟೆಯ ಕಪಾಟುಗಳ ಒಳ ಮೂಲೆಗಳು, ಒಳ ಅಂಚುಗಳು, ಬಾಗಿಲ ಹೊಸ್ತಿಲು, ಕಿಟಕಿ, ಮನೆಯ ಒಳಗೆ ಕೇಬಲ್ ಅಥವಾ ಬಟ್ಟೆ ಒಣಗಿಸಲು ಕಟ್ಟಿರುವ ಹಗ್ಗ ಮೊದಲಾದ ಕಡೆಗಳಲ್ಲೆಲ್ಲಾ ದಾಲ್ಚಿನ್ಕ್ ಪುಡಿಯನ್ನು ತೆಳುವಾಗಿ ಚಿಮುಕಿಸುತ್ತಾ ಹೋಗಿ. ಮೊದಲ ದಿನ ಮನೆಯ ಹೊರಗೆ ಹೋಗುವಾಗ ಕಿಟಕಿ ಬಾಗಿಲುಗಳನ್ನು ಮುಚ್ಚಿಯೇ ಹೋಗಿ.
ಈ ಘಾಟು ಇರುವವರೆಗೂ ಇರುವೆಗಳು ಬರಲಾರವು. ಆದರೆ ಘಾಟು ಹೆಚ್ಚು ದಿನ ಇರದ ಕಾರಣ ಆಗಾಗ ಮನೆಯನ್ನು ಸ್ವಚ್ಛಗೊಳಿಸಿದ ಬಳಿಕ ಈ ಪುಡಿಯನ್ನು ಸಿಂಪಡಿಸುತ್ತಲೇ ಇರಬೇಕು. ಇದು ಕೊಂಚ ತ್ರಾಸದಾಯಕವಾಗಿರುವ ಕಾರಣ ಪುಡಿಯನ್ನು ಸಿಂಪಡಿಸುವ ಬದಲು ದಾಲ್ಚಿನ್ನಿ ಎಣ್ಣೆಯ ಅವಶ್ಯಕ ತೈಲದಲ್ಲಿ ಹತ್ತಿಯುಂಡೆಯನ್ನು ಮುಳುಗಿಸಿ ಹಿಂಡಿ ಈ ಉಂಡೆಗಳನ್ನು ಇರುವೆಗಳು ಬರುವ ಸ್ಥಳದಲ್ಲಿರಿಸಬೇಕು ಈ ವಿಧಾನ ಸರಳ ಮತ್ತು ಹೆಚ್ಚು ಶ್ರಮ ನೀಡದಂತಹದ್ದಾಗಿದೆ.
ಲಿಂಬೆ ರಸ
ಇರುವೆಗಳಿಗೆ ಯಾವುದೇ ಆಮ್ಲದ ವಾಸನೆ ಹಿಡಿಸುವುದಿಲ್ಲ. ಲಿಂಬೆಯ ಆಮ್ಲೀಯ ಗುಣ ಮತ್ತು ಆಮ್ಲೀಯ ಪರಿಮಳವನ್ನು ಇರುವೆಗಳು ಸಹಿಸಲಾರವು. ಇದಕ್ಕಾಗಿ ನೀರು ಸಿಂಪಡಿಸುವ ಉಪಕರಣದಲ್ಲಿ ಒಂದು ಲಿಂಬೆಯ ರಸವನ್ನು ಕೊಂಚ ನೀರಿನೊಂದಿಗೆ ಮಿಶ್ರಣ ಮಾಡಿ ಇರುವೆಗಳು ಸಾಗುವ ಸಂಭವ ಇರುವ ಸ್ಥಳದಲ್ಲೆಲ್ಲಾ ಸಿಂಪಡಿಸುತ್ತಾ ಸಾಗಬೇಕು. ಈ ವಿಧಾನ ಕೊಂಚ ತ್ರಾಸದಾಯಕವಾಗಿರುವ ಕಾರಣ ಹತ್ತಿಯುಂಡೆಯನ್ನು ಲಿಂಬೆರಸದಲ್ಲಿ ಅದ್ದಿ ಇರುವೆಗಳು ಬರುವ ಸ್ಥಳದಲ್ಲಿ ಇರಿಸಬೇಕು.
ವಾರಕ್ಕೊಮ್ಮೆ ಈ ಉಂಡೆಗಳನ್ನು ನಿವಾರಿಸಿ ಹೊಸ ಉಂಡೆಗಳನ್ನು ಇರಿಸಬೇಕು. ಆದರೆ ಚಿಕ್ಕ ಮಕ್ಕಳು ಇರುವ ಮನೆಯಲ್ಲಿ ಲಿಂಬೆರಸ ಸಿಂಪಡಿಸುವುದೇ ಕ್ಷೇಮ. ಮಕ್ಕಳು ಅರಿಯದೇ ಈ ಉಂಡೆಗಳನ್ನು ಮಿಠಾಯಿ ಎಂದು ಬಾಯಿಗೆ ಹಾಕಿಕೊಳ್ಳಬಹುದು.
ಕರಿಮೆಣಸು ಮೆಣಸು
ಈ ಮೆಣಸು ಎಷ್ಟು ಖಾರವೋ ಅದಕ್ಕಿಂತ ಹೆಚ್ಚು ಘಾಟು ಪರಿಮಳವನ್ನು ಹೊಂದಿದೆ. ಇರುವೆಗಳು ಸಾಲಾಗಿ ಸಾಗಲು ಈ ದಾರಿಯುದ್ದಕ್ಕೂ ಚೆಲ್ಲಿರುವ ರಾಸಾಯನಿಕಗಳೇ ಕಾರಣವಾಗಿವೆ. ಆದರೆ ಈ ಮೆಣಸಿನ ಘಾಟು ಈ ರಾಸಾಯನಿಕಗಳೆಲ್ಲಾ ಕರಗಿ ಹೋಗುವಷ್ಟು ಪ್ರಬಲವಾಗಿದ್ದು ಇರುವೆಗಳು ದಿಕ್ಕಾಪಾಲಾಗುತ್ತವೆ. ದಾರಿಯೇ ಇಲ್ಲದ ಮೇಲೆ ಇರುವೆಗಳು ಬರುವುದಾದರೂ ಎಲ್ಲಿಂದ? ಇರುವೆಗಳು ಬರುವ ಸ್ಥಳಗಳಲ್ಲಿ ಮತ್ತು ಸಾಗುವ ದಾರಿಗಳಲ್ಲೆಲ್ಲಾ ಈ ಮೆಣಸಿನ ಪುಡಿಯನ್ನು ಚಿಮುಕಿಸುತ್ತಾ ಹೋಗಿ.
ವಿಶೇಷವಾಗಿ ಅಡುಗೆ ಮನೆಯಲ್ಲಿ ಇರುವೆಗಳ ಕಾಟವಿದ್ದರೆ ಸಾಮಾನು ಇರಿಸುವ ಸ್ಥಳದ ಮೂಲೆಗಳಲ್ಲೆಲ್ಲಾ ಈ ಮೆಣಸಿನ ಪುಡಿಯನ್ನು ಸಿಂಪಡಿಸಿ. ಒಮ್ಮೆ ಸಿಂಪಡಿಸಿದರೆ ಮುಂದಿನ ಆರು ತಿಂಗಳವರೆಗಾದರೂ ಇರುವೆಗಳು ಬರುವುದಿಲ್ಲ. ಆದರೆ ಇದರ ಘಾಟು ಮನುಷ್ಯರಿಗೂ ತಲೆ ಸುತ್ತು ಬರಿಸುವಷ್ಟು ಪ್ರಬಲವಾಗಿರುವ ಕಾರಣ ಸಿಂಪಡಿಸುವಾಗ ಮುಖವನ್ನು ಮಾಸ್ಕ್ ಅಥವಾ ದಪ್ಪ ಬಟ್ಟೆಯ ಮೂಲಕ ಮುಚ್ಚಿಕೊಂಡೇ ಕಾರ್ಯನಿರ್ವಹಿಸಿ.
ಪುದೀನಾ
ಪುದೀನಾ ಎಲೆಗಳನ್ನು ಜಜ್ಜಿದಾಗ ಸೂಸುವ ಪರಿಮಳ ನಮಗೆ ಅಪ್ಯಾಯಮಾನ ಆಗಿದ್ದರೂ ಇರುವೆಗಳಿಗೆ ಮಾತ್ರ ಸಹಿಸಲಸಾಧ್ಯವಾದ ದುರ್ಗಂಧವಾಗಿರುತ್ತದೆ. ಈ ಪರಿಮಣ ಇದ್ದಷ್ಟೂ ಹೊತ್ತು ಇವು ಆಹಾರವನ್ನು ಹುಡುಕಲಾರವು ಮತ್ತು ಈ ವಾಸನೆ ಇದ್ದೆಡೆ ಬರುವುದೇ ಇಲ್ಲ. ಆದರೆ ಇವುಗಳ ಎಲೆಗಳನ್ನು ಅರೆದು ರಸ ಸಂಗ್ರಹಿಸುವುದು ತುಂಬಾ ಸಮಯ ಹಿಡಿಯುವ ಕಾರ್ಯವಾಗಿರುವುದರಿಂದ ಪರ್ಯಾವ ವಿಧಾನವನ್ನು ಅನುಸರಿಸಬಹುದು. ಎರಡು ಕಪ್ ನೀರಿನಲ್ಲಿ ಕೊಂಚ ಪುದಿನಾ ಎಲೆಗಳನ್ನು ಜಜ್ಜಿ ಹಾಕಿ ಚೆನ್ನಾಗಿ ಕುದಿಸಿ.
ಕೆಲ ನಿಮಿಷ ಕುದಿಸಿದ ಬಳಿಕ ಉರಿ ಆರಿಸಿ ತಣಿಯಲು ಬಿಡಬೇಕು. ತಣಿದ ದ್ರವವನ್ನು ಇರುವೆಗಳ ಕಾಟ ಇರುವಲ್ಲೆಲ್ಲಾ ಸಿಂಪಡಿಸುತ್ತಾ ಹೋಗಬೇಕು. ಅಥವಾ ಹತ್ತಿಯುಂಡೆಯನ್ನು ಈ ದ್ರವದಲ್ಲಿ ಅದ್ದಿ ಇರುವೆಗಳು ಸಾಗುವಲ್ಲೆಲ್ಲಾ ದಪ್ಪನಾಗಿ ಹಚ್ಚುತ್ತಾ ಹೋಗಬೇಕು. ಈ ವಿಧಾನದಿಂದಲೂ ಇರುವೆಗಳು ಹತ್ತಿರ ಬರಲಾರವು. ಇನ್ನೂ ಸುಲಭ ಮಾರ್ಗವೆಂದರೆ ಆಗಾಗ ಪುದಿನಾ ಅವಶ್ಯಕ ತೈಲವನ್ನು ಇರುವೆಗಳು ಇರುವಲ್ಲೆಲ್ಲಾ ಚಿಮುಕಿಸುತ್ತಾ ಇರುವುದು.
ಬಿಳಿ ಶಿರ್ಕಾ
ಬಿಳಿ ಅಥವಾ ಬಣ್ಣ ರಹಿತ ಶಿರ್ಕಾ ಸಹ ಪ್ರಬಲ ಹುಳಿ ವಾಸನೆಯನ್ನು ಹೊಂದಿದ್ದು ಇರುವೆಗಳ ಘ್ರಾಣ ಶಕ್ತಿಯನ್ನು ಮಸುಕುಗೊಳಿಸುತ್ತದೆ. ಈ ವಾಸನೆ ಇದ್ದಲ್ಲಿ ಇರುವೆಗಳು ತಮ್ಮ ದಾರಿಯನ್ನು ಮರೆತು ದಿಕ್ಕಾಪಾಲಾಗಿ ಓಡುತ್ತವೆ. ಇದಕ್ಕಾಗಿ ತಲಾ ಅರ್ಧ ಕಪ್ ನಷ್ಟು ಬಿಳಿ ಶಿರ್ಕಾ ಮತ್ತು ನೀರನ್ನು ಬೆರೆಸಿ ನೀರು ಸಿಂಪಡಿಸುವ ಉಪಕರಣದ ನೆರವಿನಿಂದ ಮನೆಯಲ್ಲೆಲ್ಲಾ ಇರುವೆಗಳು ಬರುವ ಸ್ಥಳಗಳಲ್ಲಿ ಸಿಂಪಡಿಸುತ್ತಾ ಹೋಗಬೇಕು. ಒಂದು ವೇಳೆ ಇರುವೆಗಳು ಈಗಾಗಲೇ ಧಾಳಿ ಇಟ್ಟಿದ್ದು ಕಚ್ಚಿಸಿಕೊಳ್ಳದೇ ಇವುಗಳನ್ನು ಹೊರಹಾಕಬೇಕೆಂದರೆ ಈ ದ್ರಾವಣವನ್ನು ತಕ್ಷಣವೇ ಇರುವೆಗಳ ಮೇಲೆ ಸಿಂಪಡಿಸಿದರೆ ಶೀಘ್ರವೇ ಇರುವೆಗಳಲ್ಲಾ ಅಲ್ಲಿಂದ ಕಾಲು ಕೀಳುತ್ತವೆ.