ನವದೆಹಲಿ:-ಸ್ಪೈಸ್ಜೆಟ್ ವಿಮಾನಕ್ಕೆ ಬಾಂಬ್ ದಾಳಿ ಬೆದರಿಕೆ ಹಿನ್ನೆಲೆ ದೆಹಲಿ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ವಿಮಾನದಲ್ಲಿದ್ದ 200ಕ್ಕೂ ಆತಂಕಕ್ಕೀಡಾದರು. ಬೆದರಿಕೆ ಸಂದೇಶ ದೊರೆತ ಬೆನ್ನಲ್ಲೇ ವಿಮಾನದಿಂದ ಪ್ರಯಾಣಿಕರನ್ನು ಇಳಿಸಿ ಸಂಪೂರ್ಣ ತಪಾಸಣೆಗಾಗಿ ಪ್ರತ್ಯೇಕ ಪ್ರದೇಶಕ್ಕೆ ಸ್ಥಳಾಂತರಗೊಳಿಸಲಾಯಿತು. ನಂತರ ವಿಮಾನ ನಿಲ್ದಾಣದಲ್ಲಿ ಭದ್ರತಾ ಕಟ್ಟೆಚ್ಚರ ಘೋಷಿಸಲಾಯಿತು
ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಎರಡು ದಿನಗಳ ಮುನ್ನವೇ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಆದಾಗ್ಯೂ, ಸ್ಪೈಸ್ಜೆಟ್ ವಿಮಾನದಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿ ನಂತರ ಶೋಧ ನಡೆಸಿದಾಗ ಅನುಮಾನಾಸ್ಪದ ಏನೂ ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಪರಿಗಣಿಸಲಾಯಿತು. ಬಿಹಾರದ ದರ್ಭಾಂಗಾದಿಂದ ಹೊರಟಿದ್ದ ವಿಮಾನದಲ್ಲಿ ಬಾಂಬ್ ಇರುವ ಬಗ್ಗೆ ಬುಕಿಂಗ್ ಕಚೇರಿಗೆ ಕರೆ ಬಂದಿತ್ತು ಎಂದು ಸ್ಪೈಸ್ಜೆಟ್ ಏರ್ಲೈನ್ಸ್ ತಿಳಿಸಿದೆ.
ನಿನ್ನೆ ಸಂಜೆ 6 ಗಂಟೆಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು ಮತ್ತು ಪ್ರತ್ಯೇಕ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ನಂತರ ವ್ಯಾಪಕ ಶೋಧ ನಡೆಸಲಾಯಿತು ಎಂದು ಏರ್ಲೈನ್ಸ್ ತಿಳಿಸಿದೆ. ಸಂಜೆಯ ವೇಳೆಗೆ ಸ್ಪೈಸ್ಜೆಟ್ ವಿಮಾನಕ್ಕೆ ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಮಾನದಲ್ಲಿ ಒಟ್ಟು 210 ಮಂದಿ ಪ್ರಯಾಣಿಕರಿದ್ದರು.
ಬಾಂಬ್ ಬೆದರಿಕೆಗೆ ಸಂಬಂಧಿಸಿದಂತೆ ತಪಾಸಣೆ ನಡೆಸಲಾಗಿದೆ ಮತ್ತು ಇದು ಹುಸಿ ಎಂಬುದು ತಿಳಿದುಬಂದಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭದ್ರತಾ ಏಜೆನ್ಸಿಗಳು ವಿಮಾನವನ್ನು ಇನ್ನೂ ಹೆಚ್ಚಿನ ಶೋಧನೆಗೆ ಒಳಪಡಿಸುತ್ತಿವೆ. ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ