ಕೆಜಿ ಚಿನ್ನ ಕದ್ದು ಗೋವಾಕ್ಕೆ ಪರಾರಿ ಆಗಿದ್ದ ಸಿನಿಮಾ ನಟಿಯನ್ನು ಬಂಧಿಸಲಾಗಿದೆ. ಸ್ನೇಹಾ ಶೆಟ್ಟಿ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ನಟಿಯಿಂದ ಕದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ನಟಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.
ಸ್ನೇಹಾ ಶೆಟ್ಟಿ, ಪ್ರಸಾದ್ ಬಾಬು ಅವರ ಮಗಳು ಮೌನಿಕಾರ ಗೆಳತಿಯಾಗಿದ್ದು, ಮೌನಿಕಾಳ ಭೇಟಿಗೆ ಆಗಾಗ್ಗೆ ಅವರ ಮನೆಗೆ ಹೋಗುತ್ತಿದ್ದರು. ಪ್ರಸಾದ್ ಬಾಬು ಕುಟುಂಬದ ಜೀವನ ಶೈಲಿ, ಆದಾಯ ಇನ್ನಿತರೆ ವಿಷಯಗಳ ಬಗ್ಗೆ ತಿಳಿದುಕೊಂಡಿದ್ದ ಸ್ನೇಹಾ ಶೆಟ್ಟಿ, ಪ್ರಸಾದ್ ಬಾಬು ಅವರು ಹಣ, ಒಡವೆಗಳನ್ನೆಲ್ಲ ಎಲ್ಲಿಟ್ಟಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಸಹ ತಿಳಿದುಕೊಂಡಿದ್ದರು.
ಪ್ರಸಾದ್ ಬಾಬು ಕುಟುಂಬದೊಟ್ಟಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದ ಸ್ನೇಹಾ ಮೇಲೆ ಕುಟುಂಬವವೂ ವಿಶ್ವಾಸವಿಟ್ಟಿದ್ದರು. ಇದೇ ವಿಶ್ವಾಸ ಬಳಸಿ ಸ್ನೇಹಾ ಶೆಟ್ಟಿ ಆಗಾಗ್ಗೆ ಅವರ ಮನೆಯಿಂದ ಚಿನ್ನ ಕದಿಯುತ್ತಿದ್ದರು. ಇತ್ತೀಚೆಗಷ್ಟೆ ಪ್ರಸಾದ್ ಬಾಬು ಹಾಗೂ ಅವರ ಕುಟುಂಬ ಮದುವೆಗೆಂದು ಹೊರಗೆ ಹೋಗಿದ್ದಾಗ ಸ್ನೇಹಾ ಶೆಟ್ಟಿ, ಪ್ರಸಾದ್ ಅವರ ಮನೆಯಿಂದ ಸುಮಾರು ಒಂದು ಕೆಜಿಗೂ ಹೆಚ್ಚು ಚಿನ್ನ ಕದ್ದಿದ್ದರು.
ಮದುವೆಯಿಂದ ಮರಳಿ ಬಂದ ಪ್ರಸಾದ್ ಬಾಬು ಕುಟುಂಬಕ್ಕೆ ಚಿನ್ನ ಕಳ್ಳತನವಾಗಿರುವ ವಿಷಯ ತಿಳಿದು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಗಳ ಪರಿಶೀಲನೆ, ಬೆರಳಚ್ಚುತಜ್ಞರ ಸಹಾಯಗಳನ್ನು ಪಡೆದು ಸುಮಾರು 11 ಜನರನ್ನು ಆರೋಪಿಗಳನ್ನಾಗಿ ಗುರುತಿಸಿ ವಿಚಾರಣೆ ನಡೆಸಿದ್ದರು. ಆರೋಪಿಗಳ ಪಟ್ಟಿಯಲ್ಲಿ ಸ್ನೇಹಾ ಶೆಟ್ಟಿ ಸಹ ಇದ್ದರು. ಸ್ನೇಹಾ ಶೆಟ್ಟಿಯ ವಿಚಾರಣೆ ನಡೆಸಿದಾಗ ತಾವು ಚಿನ್ನ ಕದ್ದಿರುವ ಸತ್ಯವನ್ನು ಸ್ನೇಹಾ ಒಪ್ಪಿಕೊಂಡಿದ್ದಾರೆ.