ಛತ್ತೀಸ್ಘಡ : ಛತ್ತೀಸ್ಘಡದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆದಿದ್ದು, 31 ನಕ್ಸಲರನ್ನು ಎನ್ಕೌಂಟರ್ ಮಾಡಲಾಗಿದೆ.. ಇದೇ ವೇಳೆ ನಕ್ಸಲರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಯೂ ಹುತಾತ್ಮರಾಗಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ.
ಇನ್ನೂ ಈ ಬಗ್ಗೆ ಮಾಹಿತಿ ನೀಡಿರುವ ಬಸ್ತಾರ್ ರೇಂಜ್ನ ಪೊಲೀಸ್ ಮಹಾ ನಿರೀಕ್ಷಕ ಸುಂದರರಾಜ್ ಪಿ, ಈ ವರ್ಷ ರಾಜ್ಯದಲ್ಲಿ ನಡೆದ ಪ್ರತ್ಯೇಕ ಎನ್ಕೌಂಟರ್ಗಳಲ್ಲಿ 81 ನಕ್ಸಲರನ್ನು ಹೊಡೆದುರುಳಿಸಲಾಗಿದೆ ಎಂದರು. ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದ ಅರಣ್ಯದಲ್ಲಿ ಇಂದು ವಿವಿಧ ಭದ್ರತಾ ಪಡೆಗಳು ಜಂಟಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಗುಂಡಿನ ಚಕಮಕಿ ನಡೆದಿದೆ. ಎನ್ಕೌಂಟರ್ನಲ್ಲಿ ಮೂವತ್ತೊಂದು ನಕ್ಸಲರು ಹತರಾಗಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.