ಆಗಸ್ಟ್ ಒಂದರಿಂದ ಏಳರವರೆಗೆ ‘ಸ್ತನ್ಯಪಾನ ಸಪ್ತಾಹ’ವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ.ತಾಯಿ ಗರ್ಭದಿಂದಲೇ ಆರಂಭವಾದ ಈ ಸಂಬಂಧ ಮಗು ಜನಿಸಿದ ನಂತರ ಸ್ತನ್ಯಪಾನದಿಂದ ಮುಂದುವರಿಯುತ್ತೆ. ತಾಯಿ ಮಗುವಿಗೆ ಎದೆ ಹಾಲುಣಿಸುವ ಕ್ರಿಯೆ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಇದರಲ್ಲಿ ಹೊಸತೇನೂ ಇಲ್ಲ. ಆದರೆ ನಾಗರಿಕತೆ ಬೆಳೆದಂತೆ ಸ್ತ್ರೀಯರ ಕಾರ್ಯಕ್ಷೇತ್ರವೂ ಬದಲಾಗುತ್ತಿವೆ. ಈ ಬದಲಾವಣೆಗಳು ತಾಯಿ ಮತ್ತು ಮಗುವಿನ ಸಂಬಂಧದ ಮೇಲೂ ಆಗುತ್ತಿದೆ.
ಎದೆಹಾಲು, ಪೌಷ್ಟಿಕಾಂಶವನ್ನು ಒದಗಿಸುವುದರ ಜತೆಗೆ ವಿವಿಧ ರೋಗಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಒದತ್ತದೆ. ಇದು ಮಗುವಿಗೆ ಸುರಕ್ಷಿತ, ಸ್ವಚ್ಛ ಮತ್ತು ಅತ್ಯಂತ ಸಮತೋಲಿತ ಆಹಾರವಾಗಿದೆ. ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಪ್ರತಿ ವರ್ಷ ಆಗಸ್ಟ್ 01 ರಿಂದ ಆಗಸ್ಟ್ 07 ರವರೆಗೆ ಆಚರಿಸಲಾಗುತ್ತದೆ. ಈ ವರ್ಷದ ಥೀಮ್ ‘ಸ್ತನ್ಯಪಾನವನ್ನು ಉತ್ತೇಜಿಸುವುದು ಮತ್ತು ಪ್ರಪಂಚದಾದ್ಯಂತದ ಮಕ್ಕಳ ಆರೋಗ್ಯವನ್ನು ಸುಧಾರಿಸುವುದು’.
ಆಗಸ್ಟ್ 1990ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್ (UNICEF) ಮತ್ತು ಇತರ ಆರೋಗ್ಯ ಸೇವಾ ಸಂಸ್ಥೆಗಳು ಎದೆಹಾಲು ರಕ್ಷಣೆ, ಪ್ರಚಾರ ಮತ್ತು ಬೆಂಬಲಕ್ಕಾಗಿ ಈ ಕರಡುಗೆ ಸಹಿ ಮಾಡಿ ಅನುಮೋದಿಸಿದವು. ಈ ಕಾರಣಕ್ಕಾಗಿ, ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತದೆ. ಸ್ತನ್ಯಪಾನದ ಪ್ರಾಮುಖ್ಯತೆ, ಇತಿಹಾಸ ಮತ್ತು ಕೆಲವು ಅಗತ್ಯ ಅಂಶಗಳ ಬಗ್ಗೆ ಮಾಹಿತಿ ಇಲ್ಲಿದೆ.
ಮೊದಲ ಹೆರಿಗೆಯ ಬಳಿಕ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಎದೆಹಾಲು ಮುಖ್ಯವಾಗಿರುವುದರಿಂದ ತಾಯಿಂಯದಿರು ತಿಳಿದುಕೊಳ್ಳುವುದು ಮುಖ್ಯ. ಹೀಗಾಗಿ ಈ ದಿನವು ಸ್ತನ್ಯಪಾನದ ಪ್ರಾಮುಖ್ಯತೆಯನ್ನು ಉತ್ತೇಜಿಸುತ್ತದೆ ಮತ್ತು ಪ್ರಪಂಚದಾದ್ಯಂತ ಮಹಿಳೆಯರಿಗೆ ತಮ್ಮ ಶಿಶುಗಳಿಗೆ ನಿರ್ದಿಷ್ಟ ಅವಧಿಯವರೆಗೆ ಹಾಲುಣಿಸಲು ಪ್ರೋತ್ಸಾಹಿಸುವ ಉದ್ದೇಶವನ್ನು ಈ ದಿನವೂ ಹೊಂದಿದೆ. ಅದಲ್ಲದೇ ಈ ಸಪ್ತಾಹದಲ್ಲಿ ತಾಯಿಯ ಎದೆಹಾಲಿನ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುವುದು ಹಾಗೂ ಮಗುವಿನ ಬೆಳವಣಿಗೆಗೆ ತಾಯಿಯ ಹಾಲು ಎಷ್ಟು ಮುಖ್ಯ ಎನ್ನುವ ಬಗ್ಗೆ ಮಾಹಿತಿ ನೀಡುವ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.