ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಹಳ್ಳಿ ಟಾಸ್ಕ್ ಈ ಸೀಸನ್ ಅತಿ ಹೆಚ್ಚು ಸದ್ದು ಮಾಡಿದ ಕೆಲವು ಗಳಿಗೆಳಲ್ಲಿ ಹಳ್ಳಿ ಟಾಸ್ಕ್ ಕೂಡ ಒಂದು. ಮನೆಯೊಳಗೆ ಹಳ್ಳಿಯ ವಾತಾವರಣವನ್ನು ಸೃಷ್ಟಿ ಮಾಡಿ ಎರಡು ಕುಟುಂಬಗಳಾಗಿ ಮನೆಯ ಸದಸ್ಯರನ್ನು ವಿಂಗಡಿಸಲಾಗಿತ್ತು. ಅವರ ನಡುವೆ ವಿವಿಧ ಟಾಸ್ಕ್ಗಳನ್ನು ನೀಡಲಾಗಿತ್ತು. ಈ ಸಂದರ್ಭದಲ್ಲಿ ವಿನಯ್ ಒಂದು ಕುಟುಂಬದ ಯಜಮಾನನಾಗಿದ್ದರೆ, ಇನ್ನೊಂದು ಕುಟುಂಬಕ್ಕೆ ಸಂಗೀತಾ (Sangeetha) ಯಜಮಾನ್ತಿಯಾಗಿದ್ದರು. ಈ ಸಂದರ್ಭದಲ್ಲಿ ವಿನಯ್ ಮತ್ತು ಕಾರ್ತಿಕ್ ನಡುವೆ ಜಗಳ ನಡೆದಿತ್ತು. ಆ ಸಂದರ್ಭದಲ್ಲಿ ವಿನಯ್, ‘ನಾವೇನು ಬಳೆ ತೊಟ್ಕೊಂಡು ಕೂತಿಲ್ಲ’ ಎಂದು ಮಾತಾಡಿದ್ದರು. ಇದರಿಂದ ಸಿಟ್ಟಿಗೆದ್ದ ಸಂಗೀತಾ ಅವರ ಮಾತನ್ನು ಪ್ರತಿಭಟಿಸಿದ್ದಲ್ಲದೇ ಉಳಿದ ಟಾಸ್ಕ್ಗಳನ್ನು ಕೈ ತುಂಬ ಬಳೆ ತೊಟ್ಟುಕೊಂಡೇ ಆಡಿದ್ದರು. ಹಾಗೂ ವಿನಯ್ ಅವರಿಗೆ ‘ಬಳೆ ತೊಟ್ಕೊಂಡಿದೀನಿ ಬಳೆ’ ಎಂದು ಕೈಯೆತ್ತಿ ತೋರಿಸಿದ್ದರು ಕೂಡ. ಬಳೆಯ ಕುರಿತ ತಪ್ಪು ಮಾತುಗಳಿಗೆ ಸಂಗೀತಾ ನೀಡಿದ ಉತ್ತರ ಮನೆಯೊಳಗಷ್ಟೇ ಅಲ್ಲ, ಮನೆಯ ಹೊರಗೂ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ವಿನಯ್ ಆಡಿದ ಮಾತಿನ ಬಗ್ಗೆ, ಅದಕ್ಕೆ ಸಂಗೀತಾ ಕೊಟ್ಟ ಉತ್ತರದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದಿದ್ದವು. ಇದು ಸಂಗೀತಾ ಅವರ ಗಟ್ಟಿ ಮತ್ತು ದಿಟ್ಟ ವ್ಯಕ್ತಿತ್ವವನ್ನು ತೆರೆದಿಟ್ಟಿತ್ತು.
ಆ ವಾರಾಂತ್ಯದ ಪಂಚಾಯ್ತಿಯಲ್ಲಿ ಕಿಚ್ಚ ವಿನಯ್ ಮಾತುಗಳಿಗೆ ತರಾಟೆ ತೆಗೆದುಕೊಂಡಿದ್ದಲ್ಲದೆ, ಸಂಗೀತಾ ಅವರ ದಿಟ್ಟ ವರ್ತನೆಯನ್ನು ಪ್ರಶಂಸಿಸಿದ್ದರು. ಅಲ್ಲದೇ ಆ ವಾರದ ಕಿಚ್ಚನ ಚಪ್ಪಾಳೆಯನ್ನು ‘ಬಳೆ’ಗೇ ನೀಡಿದ್ದರು. ಸಂಗೀತಾ ಕೈಯಲ್ಲಿನ ಬಳೆಯ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಲ್ಲದೆ, ಹಲವು ಸೆಲೆಬ್ರಿಟಿಗಳ ಪೇಜುಗಳಲ್ಲಿ ಕಾಣಿಸಿಕೊಂಡಿತ್ತು. ಇದೊಂದೇ ಸಂದರ್ಭವಲ್ಲ. ತಮ್ಮ ಅಭಿಪ್ರಾಯಗಳನ್ನು ತಿಳಿಸುವ ಯಾವುದೇ ಸಂದರ್ಭಗಳಲ್ಲಿ ಸಂಗೀತಾ ಯಾವತ್ತೂ ಹಿಂಜರಿಕೆಗೆ ತೋರಿಸಿದ್ದಿಲ್ಲ. ರಿಸ್ಕ್ ತೆಗೆದುಕೊಳ್ಳಲು ಹಿಂದೆಮುಂದೆ ನೋಡಿದ್ದಿಲ್ಲ. ಹಾಗಾಗಿಯೇ ಸಂಗೀತಾ ಬಹುತೇಕ ಎಲ್ಲ ವಾರಗಳಲ್ಲಿಯೂ ನಾಮಿನೇಷನ್ ಲೀಸ್ಟ್ನಲ್ಲಿ ಇದ್ದೇ ಇರುತ್ತಿದ್ದರು. ಆದರೆ ಅದನ್ನೆಲ್ಲ ಗಣನೆಗೇ ತೆಗೆದುಕೊಳ್ಳದ ಅವರು, ತಮ್ಮ ಆಟವನ್ನು ಆಡುತ್ತ, ತಮಗೆ ಅನಿಸಿದ್ದನ್ನು ಹೇಳುತ್ತಲೇ ಇದ್ದರು
ಈ ಸೀಸನ್ನ ಇನ್ನೊಂದು ಬಹುದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಸಂದರ್ಭವೆಂದರೆ ರಕ್ಕಸ ಮತ್ತು ಗಂಧರ್ವರ ಟಾಸ್ಕ್. ಟಾಸ್ಕ್ ಎಂಬುದು ಸೇಡಿನ ರೀತಿ ಬದಲಾಗಿ ಮನೆಯ ವಾತಾವರಣವೂ ಪೂರ್ತಿ ಬದಲಾಗಿಬಿಟ್ಟ ವಾರವದು. ಆ ವಾರದಲ್ಲಿ ಇನ್ನೊಂದು ವಿಷಾದನೀಯ ಘಟನೆಯೂ ನಡೆಯಿತು. ಕುರ್ಚೆಯಲ್ಲಿ ಕೂರಿಸಿ ಮುಖಕ್ಕೆ ನೀರು ಸೋಕುವ ಟಾಸ್ಕ್ನಲ್ಲಿ, ಸಂಗೀತಾ ಮತ್ತು ಪ್ರತಾಪ್ ಇಬ್ಬರಿಗೂ ಕಣ್ಣಿಗೆ ಹಾನಿಯಾಗಿ ಆಸ್ಪತ್ರೆಗೆ ಸೇರುವಂತಾಗಿತ್ತು. ಇದರಿಂದ ಹಲವು ದಿನಗಳ ಕಾಲ ಸಂಗೀತಾ ಮತ್ತು ಪ್ರತಾಪ್ ಇಬ್ಬರೂ ಆಸ್ಪತ್ರೆಯಲ್ಲಿ ಕಳೆಯುವಂತಾಗಿತ್ತು. ಹಾಗೆ ಹೊರಗೆ ಹೋದ ಸಂಗೀತಾ ವಾಪಸ್ ಬರುತ್ತಾರೋ ಇಲ್ಲವೋ ಎಂದು ಎಲ್ಲರೂ ಅಂದುಕೊಳ್ಳುತ್ತಿರುವಾಗಲೇ ಕಪ್ಪು ಕನ್ನಡಕ ತೊಟ್ಟ ಸಂಗೀತಾ ಮತ್ತು ಪ್ರತಾಪ್ ರೀ ಎಂಟ್ರಿ ಕೊಟ್ಟಿದ್ದರು. ಹಾಗೆಯೇ ಹಿಂದೆಂದಿಗಿಂತ ಹೆಚ್ಚಿನ ಉತ್ಸಾಹದೊಂದಿಗೆ, ಹಟದೊಂದಿಗೆ ಮನೆಗೆ ಬಂದಿದ್ದರು. ಅದನ್ನು ತಮ್ಮ ಆಟಗಳಲ್ಲಿ ತೋರಿಸಿಯೂ ಕೊಟ್ಟರು.
ಹಲವು ಸಂದರ್ಭದಲ್ಲಿ ಇಡೀ ಮನೆಯ ಎಲ್ಲರನ್ನೂ ಎದುರುಹಾಕಿಕೊಂಡು ಒಬ್ಬಂಟಿಯಾಗಿದ್ದ ಸಂದರ್ಭವೂ ಸಾಕಷ್ಟಿವೆ. ಆ ಸಂದರ್ಭದಲ್ಲಿಯೂ ಸಂಗೀತಾ ಹಿಂಜರಿಕೆ ತೋರಿದ್ದಿಲ್ಲ. ಮೊದಲ ವಾರದಲ್ಲಿ ಅಸಮರ್ಥರ ಗುಂಪಿನಲ್ಲಿದ್ದ ಸಂಗೀತಾ, ತನಿಷಾ ಮತ್ತು ಕಾರ್ತಿಕ್ ಈ ಮೂವರೂ ಸಾಕಷ್ಟು ಆಪ್ತರಾದರು. ತ್ರಿಕೋನ ಸ್ನೇಹ ಹಲವು ವಾರಗಳ ಕಾಲ ಅಬಾಧಿತವಾಗಿ ಉಳಿದಿತ್ತು. ಈ ಸ್ನೇಹಸಂಬಂಧದಲ್ಲಿಯೂ ಸಂಗೀತಾ ಅವರ ವ್ಯಕ್ತಿತ್ವದ ಆಯಾಮಗಳು ಬಿಚ್ಚಿಕೊಂಡವು. ಲುಡೊ ಟಾಸ್ಕ್ನಲ್ಲಿ ಸಂಗೀತಾಳನ್ನು ಉಳಿಸುವ ಅವಕಾಶ ಇದ್ದಾಗಲೂ ಸೇವ್ ಮಾಡದಿರುವುದು ಸಂಗೀತಾ ಅವರಲ್ಲಿ ಅಸಮಧಾನ ಹುಟ್ಟಿಸಿತ್ತು. ಅದನ್ನು ಅವರು ನೇರವಾಗಿಯೇ ಹೇಳಿಕೊಂಡಿದ್ದರು ಕೂಡ. ಆ ಹಂತದಲ್ಲಿ ಕಾರ್ತೀಕ್ ಮತ್ತು ಸಂಗೀತಾ ಮಧ್ಯ ಸಣ್ಣ ಬಿರುಕು ಕಾಣಿಸಿಕೊಂಡಿತ್ತು. ‘ನಾನು ಯಾರನ್ನೂ ಅಷ್ಟಾಗಿ ನಂಬುವುದಿಲ್ಲ. ಯಾರನ್ನಾದರೂ ನಂಬಿದ್ದೇನೆ ಅಂದರೆ ಅವರಿಂದ ಬೆಂಬಲವನ್ನು ನಿರೀಕ್ಷಿಸುತ್ತೇನೆ’ ಎಂಬುದು ಸಂಗೀತಾ ನಿಲುವು. ಇದು ಕೆಲವೊಮ್ಮೆ ಕಿರಿಕಿರಿ ಹುಟ್ಟಿಸಿದ್ದೂ ಇದೆ. ಆದರೆ ಆ ಸ್ವಭಾವದಿಂದ ಬಹುಬೇಗ ಹೊರಬಂಧ ಸಂಗೀತಾ ಸ್ವತಂತ್ರವಾಗಿ ಆಡಲು, ಇರಲು ಪ್ರಾರಂಭಿಸಿದ್ದರು. ಹಾಗಾಗಿಯೇ ಎಲ್ಲರ ಜೊತೆಗೂ ಸ್ನೇಹದಿಂದಲೂ ಇರುತ್ತಲೂ, ಅಷ್ಟೇ ನೇರವಾಗಿ ಜಗಳವಾಡಲೂ ಅವರಿಗೆ ಸಾಧ್ಯವಾಗುತ್ತಿತ್ತು.