ನಾವು ವಾಸ ಮಾಡುವ ಪರಿಸರ ಸ್ವಚ್ಛವಾಗಿರಬೇಕು ಎಂದು ನಾವೆಲ್ಲ ಅಂದುಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ನಮ್ಮ ಅಜಾಗರೂಕತೆ ಯಿಂದ ನಮ್ಮದೇ ಮನೆ ಯಲ್ಲಿ ಇದೇ ವಿಚಾರಕ್ಕೆ ತೊಂದರೆಗೆ ಒಳಗಾಗುತ್ತೇವೆ. ಅಡುಗೆ ಮನೆಯಲ್ಲಿ, ಬಾತ್ರೂಮ್ ನಲ್ಲಿ ಸಿಂಕ್ ಕಟ್ಟಿಕೊಂಡು ಪರದಾಡಿದ ಬೇಕಾದಷ್ಟು ಉದಾಹರಣೆ ಗಳಿವೆ. ಇದರಿಂದ ಮನೆ ಗಬ್ಬು ನಾರುವಂತೆ ಅನುಭವವಾಗುತ್ತದೆ. ಈ ಸಿಂಕನ್ನು ಸರಿಯಾಗಿ ಶುಚಿಗೊಳಿಸದಿದ್ದರೆ ಹಲವಾರು ರೋಗಗಳು ಕಾಡುತ್ತವೆ. ಈ ಕೆಲವು ಸಲಹೆಗಳನ್ನು ಅನುಸರಿಸಿದರೆ ಅಡುಗೆ ಮನೆಯ ಸಿಂಕ್ ನಲ್ಲಿ ತುಂಬಿರುವ ಬ್ಲಾಕ್ ಅನ್ನು ತೆಗೆಯಬಹುದು.
- ಅಡುಗೆ ಮನೆಯ ಸಿಂಕ್ ಬ್ಲಾಕ್ ನಿಂದಾಗಿ ಕಿಚನ್ ಕೆಟ್ಟ ವಾಸನೆ ಬರುತ್ತಿರುತ್ತದೆ. ಸಿಂಕ್ ಬ್ಲಾಕ್ ಆದಾಗ ಕುದಿಯುವ ನೀರನ್ನು ಸಿಂಕ್ಗೆ ಸುರಿಯಿರಿ. ಹೀಗೆ ಮಾಡಿದಾಗ ಪೈಪ್ನ ಬದಿಗಳಲ್ಲಿ ಅಂಟಿರುವ ಜಿಡ್ಡು, ಸಿಲುಕಿ ಹಾಕಿಕೊಂಡಿರುವ ಪದಾರ್ಥಗಳು ಕೊಚ್ಚಿ ಹೋಗಿ ಪೈಪ್ ಸ್ವಚ್ಛವಾಗುತ್ತದೆ.
- ಬ್ಲಾಕ್ ಆಗಿರುವ ಸಿಂಕನ್ನು ತೆರವುಗೊಳಿಸಲು ಒಂದು ಕಪ್ ನೀರಿಗೆ ಬೇಕಿಂಗ್ ಸೋಡಾ ಬೆರೆಸಿ ಸಿಂಕ್ ಮೇಲೆ ಸುರಿಯಿರಿ. ಆ ತಕ್ಷಣವೇ ವಿನೆಗರ್ ಅನ್ನು ಸುರಿದರೆ ಸಿಂಕ್ ಒಳಗೆ ಬ್ಲಾಕ್ ಆಗಿರುವ ಪದಾರ್ಥಗಳು ಸರಾಗವಾಗಿ ಹರಿದು ಹೋಗುತ್ತದೆ.
- ಸಿಂಕ್ ಬ್ಲಾಕ್ ಆಗಿದ್ದರೆ ಅರ್ಧ ಕಪ್ ಉಪ್ಪು ಹಾಕಿ, ಆ ಬಳಿಕ ಅರ್ಧ ಕಪ್ ಬೇಕಿಂಗ್ ಸೋಡಾ ಹಾಕಿ. ಅರ್ಧ ಗಂಟೆ ಬಿಟ್ಟು ಒಂದು ಕಪ್ ಬಿಸಿ ನೀರನ್ನು ಸುರಿಯುವುದರಿಂದ ಬ್ಲಾಕ್ ಸರಿಯಾಗುತ್ತದೆ.
- ಅಡುಗೆ ಮನೆಯ ಸಿಂಕ್ ಗಳನ್ನು ತೆರವುಗೊಳಿಸಲು ಒಂದು ಕಪ್ ಅಡುಗೆ ಸೋಡಾವನ್ನು ಒಂದು ಕಪ್ ನಿಂಬೆ ರಸದೊಂದಿಗೆ ಬೆರೆಸಿ ಸಿಂಕ್ ಗೆ ಹಾಕಿ, ಸ್ವಲ್ಪ ಸಮಯದ ನಂತರದಲ್ಲಿ ಕುದಿಯುವ ನೀರನ್ನು ಹಾಕಿದರೆ ಪೈಪ್ ಒಳಗಿರುವ ಜಿಡ್ಡು ಹಾಗೂ ಆಹಾರ ಪದಾರ್ಥಗಳು ಸುಲಭವಾಗಿ ಹರಿದು ಹೋಗುತ್ತದೆ.
- ಸತತ ಪರಿಶ್ರಮದ ನಂತರವೂ ನಿಮಗೆ ಸಿಂಕ್ ಬ್ಲಾಕ್ ಅನ್ನು ತೆಗೆಯಲು ಆಗದಿದ್ದಲ್ಲಿ ನೀವು ಡ್ರೇನ್ ಸ್ನೇಕ್ ಅನ್ನು ಬಳಸಬಹುದು. ಡ್ರೇನ್ ಸ್ನೇಕ್ ಕೇಬಲ್ ಅನ್ನು ಸಿಂಕ್ ನ ಪೈಪ್ ಒಳಗೆ ಹಾಕಿ ಡ್ರೇನ್ ಸ್ನೇಕ್ ಹ್ಯಾಂಡಲ್ ಅನ್ನು 3-4 ಬಾರಿ ತಿರುಗಿಸಬೇಕು. ಎಲ್ಲ ಕ್ಲಾಗ್ ಗಳು ಸ್ವಚ್ಛವಾಗುವವರೆಗೂ ಹೀಗೆ ಮಾಡಬೇಕು. ಡ್ರೇನ್ ಸ್ನೇಕ್ ಕೇಬಲ್ ನಿಂದ ಸಿಂಕ್ ಅಲ್ಲಿ ಸಿಕ್ಕಿ ಹಾಕಿಕೊಂಡ ಕಸಗಳನ್ನು ಸುಲಭವಾಗಿ ತೆಗೆಯಬಹುದು.
- ಬ್ಲಾಕ್ ಆದ ಸಿಂಕ್ ಅನ್ನು ಸುಲಭವಾಗಿ ಕ್ಲೀನ್ (Clean) ಮಾಡಲು ಬಿಸಿ ನೀರನ್ನು ಬಳಸಬೇಕು. ಬಿಸಿ ನೀರನ್ನು ಸಿಂಕ್ ಗೆ ಸುರಿದಾಗ ಪೈಪ್ ನಲ್ಲಿ ಕುಳಿತ ಗ್ರೀಸ್ ನಂತಹ ಅಂಶಗಳು ಕ್ಷಣಾರ್ಧದಲ್ಲಿ ಸ್ವಚ್ಛವಾಗುತ್ತದೆ. ಒಮ್ಮೆ ನಿಮ್ಮ ಸಿಂಕ್ ಚೀನೀ ಮಣ್ಣಿನಿಂದ ಮಾಡಿದ್ದಾಗಿದ್ದರೆ ಅಥವಾ ಸಿಂಕ್ ಗೆ ಪಿವಿಸಿ ಡ್ರೈನ್ ಗಳನ್ನು ಬಳಸಿದಲ್ಲಿ ಬಿಸಿ ನೀರನ್ನು ಹಾಕಬೇಡಿ. ಏಕೆಂದರೆ ಬಿಸಿ ನೀರು ಪಿವಿಸಿ ಪೈಪ್ (PVC Pipe ) ಅನ್ನು ಮೃದುಗೊಳಿಸುತ್ತದೆ. ನಿಮ್ಮ ಸಿಂಕ್ ಸ್ಟೀಲಿನದ್ದಾದರೆ ನೀವು ಬಿಸಿ ನೀರನ್ನು ಹಾಕಬಹುದು.
- ಅಡುಗೆಮನೆಯ ಸಿಂಕ್ (Kitchen Sink) ಬ್ಲಾಕ್ ಅನ್ನು ತೆಗೆಯಲು ರಬ್ಬರ್ ಕೊಳವೆಯನ್ನು ಬಳಸಬಹುದು. ರಬ್ಬರ್ ಕೊಳವೆಯ ಸಹಾಯದಿಂದ ನಲ್ಲಿ ಮತ್ತು ಪೈಪ್ ಎರಡನ್ನೂ ಜೋಡಿಸಿ. ನಂತರ ನಲ್ಲಿಯ ನೀರನ್ನು 3 ನಿಮಿಷಗಳ ಕಾಲ ಜೋರಾಗಿ ಬಿಡಿ. ಹೀಗೆ ಮಾಡುವುದರಿಂದ ನೀರಿನ ರಭಸಕ್ಕೆ ಕೊಳೆಯೆಲ್ಲ ಸ್ವಚ್ಛವಾಗುತ್ತದೆ. ವಾರದಲ್ಲಿ ಒಮ್ಮೆಯಾದರೂ ಸಿಂಕ್ ಸ್ವಚ್ಛ ಮಾಡುವುದು ಒಳ್ಳೆಯದು. ಸಾಧ್ಯವಿಲ್ಲವೆನ್ನುವವರು 15 ದಿನಗಳಿಗೆ ಒಮ್ಮೆ ಸಿಂಕ್ ಸ್ವಚ್ಛಗೊಳಿಸಬೇಕು. ಇಲ್ಲವಾದರೆ ನೀರು ಹೊರಗೆ ಹೋಗದೆ ಸಮಸ್ಯೆ ಶುರುವಾಗುತ್ತದೆ.