ಯಲಹಂಕ: ನಾಟಕ ನಡೆಯುವಾಗಲೇ ವೇದಿಕೆ ಮೇಲೆ ಕುಸಿದು ಬಿದ್ದು ಕಲಾವಿದ ಸಾವನ್ನಪ್ಪಿರುವ ಘಟನೆ ಯಲಹಂಕದ ಸಾತನೂರು ಗ್ರಾಮದಲ್ಲಿ ನಡೆದಿದೆ. ಎನ್ ಮುನಿಕೆಂಪಣ್ಣ (72) ಸಾವನಪ್ಪಿರುವ ದುರ್ದೈವಿಯಾಗಿದ್ದು, ಯಲಹಂಕ ತಾಲೂಕಿನ ಸಾತನೂರು ಬಳಿ ಕುರುಕ್ಷೇತ್ರ ನಾಟಕ ಪ್ರದರ್ಶನ ನಡೆಯುತ್ತಿತ್ತು.
ಈ ವೇಳೆ, ನಾಟಕದಲ್ಲಿ ಶಕುನಿಯ ಪಾತ್ರ ನಿರ್ವಹಿಸುತ್ತಿದ್ದ ಮುನಿಕೆಂಪಣ್ಣ ರಾತ್ರಿ 1 ಗಂಟೆ ಸುಮಾರಿಗೆ ಪಾತ್ರದಲ್ಲಿ ಅಭಿನಯಿಸುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮೃತ ಮುನಿಕೆಂಪಣ್ಣ ಅವರು ನಿವೃತ್ತ ಉಪನ್ಯಾಸಕರು, ಸಾಹಿತಿ, ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ದೇವನಹಳ್ಳಿಯ 28ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅವರ ಹುಟ್ಟೂರಾದ ಅರದೇಶಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.