ಕೊಡಗು : ಕಾಲುವೆಯಲ್ಲಿ ಸಿಲುಕಿಕೊಂಡು ಮರಿಯಾನೆಯೊಂದು ಪರದಾಡಿದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಚಿಕ್ಲಿಹೊಳೆ ಜಲಾಶಯದ ಬಳಿ ನಡೆದಿದೆ. ತಾಯಿ ಆನೆಯೊಂದಿಗೆ ಕಾಲುವೆ ದಾಟುತ್ತಿದ್ದ ಮರಿಯಾನೆ ಆಕಸ್ಮಿಕವಾಗಿ ನೀರಿನೊಳಗೆ ಬಿದ್ದು ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಸ್ಥಳೀಯರ ನೆರವಿನಿಂದ ರಕ್ಷಿಸಲ್ಪಟ್ಟಿರುವ ಘಟನೆ ಕಂಬಿಬಾಣೆ ಚಿಕ್ಲಿಹೊಳೆ ಜಲಾಶಯ ಸಮೀಪ ನಡೆದಿದೆ.
ಕಳೆದ ಒಂದು ವಾರದಿಂದ ತಾಯಿ ಆನೆ ಮತ್ತು ಅದರ ಮರಿ ಚಿಕ್ಲಿಹೊಳೆ ಜಲಾಶಯ ಸಮೀಪದಲ್ಲಿ ಅಡ್ಡಾಡಿಕೊಂಡಿದ್ದು, ಮೊನ್ನೆ ರಾತ್ರಿ ಕಬ್ಬಿನಗದ್ದೆ ಕಾಲುವೆಯನ್ನು ದಾಟಲು ಮುಂದಾಗಿವೆ. ತಾಯಿ ಆನೆ ಕಾಲುವೆ ದಾಟಿದೆ. ಆದರೆ ಮರಿ ಆನೆ ಕಾಲುವೆಯಿಂದ ಹಾರುವಾಗ ನೀರಿನೊಳಗೆ ಬಿದ್ದಿದೆ. ನಿನ್ನೆ ಬೆಳಗ್ಗೆ ಇದನ್ನು ಗಮನಿಸಿದ ಸ್ಥಳೀಯರು ಆನೆಕಾಡು ಮೀಸಲು ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದ್ದಾರೆ. ನಂತರ ಅರಣ್ಯ ಇಲಾಖೆಯವರು ಮತ್ತು ಸ್ಥಳೀಯರು ಕಾಲುವೆಯ ಒಂದು ಭಾಗದಲ್ಲಿ ಕಾಡಾನೆ ನೀರಿನಿಂದ ಮೇಲಕ್ಕೆ ಬರಲು ದಾರಿ ಮಾಡಿಕೊಟ್ಟಿದ್ದಾರೆ. ಇವರ ಪರಿಶ್ರಮದಿಂದಾಗಿ ಮರಿ ಆನೆ ಸುರಕ್ಷಿತವಾಗಿ ದಡ ಸೇರಿದೆ.ಘಟನೆಯ ನಂತರ ಕಾಡು ಸೇರಿಕೊಂಡಿರುವ ತಾಯಿ ಆನೆಯೊಂದಿಗೆ ಅಂದಾಜು 6 ತಿಂಗಳ ಮರಿ ಆನೆಯನ್ನು ಸೇರಿಸುವ ಕಾರ್ಯಾಚರಣೆ ನಡೆಯುತ್ತಿದೆ.