ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮಗೆ ಮುಸ್ಲಿಮರ ಮೇಲೆ ಅಷ್ಟೊಂದು ಕಾಳಜಿ, ಪ್ರೀತಿ ಇದ್ದಿದ್ದೇ ಆದರೆ ನೀವು ನಿಮ್ಮ ಆಸ್ತಿಯನ್ನು ಮಾರಿ ಅವರಿಗೆ ಹಣ ಕೊಡಿ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ಅಲ್ಪಸಂಖ್ಯಾತರಿಗೆ ಸರ್ಕಾರ 10 ಸಾವಿರ ಕೋಟಿ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಬಗ್ಗೆ ಬಹಳಷ್ಟು ಗೌರವ ಇದೆ. ಸಿಎಂ ಆದವರು ಎಲ್ಲಾ ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು.
ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ. ನಮಗೆ ಸಂಘರ್ಷದ ಅವಶ್ಯಕತೆ ಇಲ್ಲ. ಆದರೆ ಇಲ್ಲಿ ಸಿದ್ದರಾಮಯ್ಯ ಅವರು ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ ಎಂದು ಕಿಡಿಕಾರಿದ್ರು. ಸಿದ್ದರಾಮಯ್ಯ ಅವರು ನಾನು ಕುಂಕುಮ ಹಚ್ಚಲ್ಲ, ಕೇಸರಿ ಪೇಟಾ ಹಾಕಲ್ಲ ಅಂತ ಹೇಳುತ್ತಾರೆ.
ನಿಮ್ಮ ಹೆಸರಲ್ಲಿ ಸಿದ್ದರಾಮ ಎಂದು ಭಗವಂತನ ಹೆಸರಿಟ್ಟಿದ್ದಾರೆ. ಅಷ್ಟೊಂದು ಕಾಳಜಿ ಪ್ರೀತಿ ಇದ್ರೆ ನಿಮ್ಮ ಮನೆಯಿಂದ ಕೊಡಿ. ನೀವೇನ್ ದೇಶದ ಪ್ರಧಾನ ಮಂತ್ರಿನಾ..?, ಸಿದ್ದರಾಮಯ್ಯ ಇದು ನಿಮ್ಮ ಆಸ್ತಿನಾ..?, ಇಲ್ಲೇನ್ ಪಾಕಿಸ್ತಾನ ಆಡಳಿತ ಮಾಡುತ್ತಾ..?. ಸಿದ್ದರಾಮಯ್ಯ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು. ತಕ್ಷಣವೇ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ಇದೇ ವೇಳೆ ರೇಣುಕಾಚಾರ್ಯ ಒತ್ತಾಯಿಸಿದರು.