ರಿಯಾದ್: ಉಮ್ರಾ ಕೈಗೊಳ್ಳಲು ಸೌದಿ ಅರೇಬಿಯಾಗೆ ಪ್ರಯಾಣಿಸುವವರು ಇನ್ನು ಮುಂದೆ ನೈಸೆರಿಯ ಮೆನಿಂಜೈಟಿಸ್ ವಿರುದ್ಧ ಲಸಿಕೆ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಸೌದಿ ಅರೇಬಿಯಾದ ಪ್ರಧಾನ ನಾಗರಿಕ ವಿಮಾನ ಯಾನ ಪ್ರಾಧಿಕಾರ ಸುತ್ತೋಲೆಯಲ್ಲಿ ತಿಳಿಸಿದೆ.
ಕಳೆದ ಕೆಲ ತಿಂಗಳ ಹಿಂದೆ ಮೆನಿಂಜೈಟಿಸ್ ಲಸಿಕೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿತ್ತು. ಆದರೆ ಇದೀಗ ಹಳೆಯ ಆದೇಶವನ್ನು ವಾಪಸ್ ಪಡೆಯಲಾಗಿದೆ. ಸದ್ಯ ಹೊರಡಿಸಲಾಗಿರುವ ಸುತ್ತೋಲೆಯ ಮಾರ್ಗಸೂಚಿಯ ಪಾಲನೆಗಾಗಿ ಸೌದಿ ಅರೇಬಿಯ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಿಸುವ ಖಾಸಗಿ ವಿಮಾನ ಯಾನ ಸಂಸ್ಥೆಗಳು ಸೇರಿದಂತೆ ಎಲ್ಲ ವಿಮಾನ ಯಾನ ಸಂಸ್ಥೆಗಳಿಗೂ ರವಾನಿಸಿದೆ.
ಹಾಲಿ ಪ್ರಕಟಣೆಗೂ ಮುನ್ನ, ತಮ್ಮ ವೀಸಾ ಸ್ವರೂಪದ ಹೊರತಾಗಿಯೂ, ಉಮ್ರಾ ಯಾತ್ರಾರ್ಥಿಗಳು ಮೆನಿಂಜೈಟಿಸ್ ಲಸಿಕೆ ಪಡೆಯುವುದನ್ನು ಸೌದಿ ಅರೇಬಿಯಾದ ಅರೋಗ್ಯ ಸಚಿವಾಲಯ ಕಡ್ಡಾಯಗೊಳಿಸಿತ್ತು. ಈ ಲಸಿಕೆಯನ್ನು ಸೌದಿ ಅರೇಬಿಯಾಗೆ ಆಗಮಿಸುವುದಕ್ಕೂ ಮುನ್ನ ಪಡೆಯಬೇಕಾಗಿತ್ತು.
ತಮ್ಮ ಪ್ರವಾಸಕ್ಕೂ ಮುನ್ನ, ಹಜ್ ಹಾಗೂ ಉಮ್ರಾ ಯಾತ್ರಾರ್ಥಿಗಳು ಈ ಲಸಿಕೆ ಪಡೆಯವುದನ್ನು ಸೌದಿ ಅರೇಬಿಯಾದ ಪ್ರಾಧಿಕಾರಗಳು ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಕಡ್ಡಾಯಗೊಳಿಸಿದ್ದವು. ಇದೀಗ ಹಿಂದಿನ ಆದೇಶವನ್ನು ರದ್ದುಗೊಳಿಸಿ ಸುತ್ತೋಲೆ ಹೊರಡಿಸಿದೆ.