ಬಾಗಲಕೋಟೆ: ಜಿಲ್ಲೆಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯರನ್ನು ಕಬ್ಬು ಬೆಳೆಗಾರರು ಭೇಟಿ ನೀಡಿ ತಮ್ಮ ಅಹವಾಲು ಸಲ್ಲಿಸಿದರು. ಕಳೆದ ಕೆಲ ದಿನಗಳಿಂದ ಕಬ್ಬಿಗೆ 3500 ದರ ನಿಗದಿಸುವಂತೆ ಆಗ್ರಹಿಸಿ ರೈತರ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಇಂದು ಬಾಗಲಕೋಟೆಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಕಬ್ಬು ಬೆಳೆಗಾರರ ಸಂಘದ ಸದಸ್ಯರು, ತಮ್ಮ ಮನವಿ ಸಲ್ಲಿಸಿದರು.
ರೈತರ ಮನವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ನಾಲ್ಕು ದಿನಗಳಲ್ಲಿ ಸಭೆ ನಡೆಸುವಂತೆ ಸಚಿವರಿಗೆ ಸೂಚನೆ ನೀಡಿದರು. ಸ್ಥಳದಲ್ಲೇ ಇದ್ದ ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪುರಗೆ ಸಭೆ ನಡೆಸಿ, ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಸಿಎಂ ಸೂಚನೆ ಹಿನ್ನೆಲೆ ಬುಧವಾರ ಇಲ್ಲವೇ ಗುರುವಾರ ರೈತರ ಜೊತೆಗೆ ಸಚಿವರು ಸಭೆ ನಡೆಸುವ ಸಾಧ್ಯತೆ ಇದ್ದು, ನಾಲ್ಕು ದಿನದ ಒಳಗೆ ಸಭೆಯ ಸಮಗ್ರ ವರದಿಯನ್ನು ಸಲ್ಲಿಸುವ ಸಾಧ್ಯತೆ ಇದೆ.