ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ.
ಸೋಮವಾರ ನಗರದ ಹಲವೆಡೆ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗಿದ್ದು, ಕೆಲವು ಪ್ರದೇಶಗಳಲ್ಲಿ ಭಾರೀ ಮಳೆ ಸುರಿದಿತ್ತು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ (ಕೆಎಸ್ಎನ್ಡಿಎಂಸಿ) ಅಂಕಿಅಂಶಗಳ ಪ್ರಕಾರ, ರಾತ್ರಿ 9 ಗಂಟೆಯ ಹೊತ್ತಿಗೆ ರಾಜಮಹಲ್ ಗುಟ್ಟಹಳ್ಳಿಯಲ್ಲಿ ಗರಿಷ್ಠ 39.5 ಮಿಮೀ ಮಳೆಯಾಗಿದ್ದು, ನಂತರದ ದಯಾನಂದ ನಗರದಲ್ಲಿ (32.5 ಮಿಮೀ) ಮಳೆಯಾಗಿದೆ. ನಗರದ 18 ವಾರ್ಡ್ಗಳಲ್ಲಿ 10 ಮಿಮೀಗೂ ಹೆಚ್ಚು ಮಳೆಯಾಗಿದೆ.
ವಲಯವಾರು ನೋಡುವುದಾದರೆ ಬೊಮ್ಮನಹಳ್ಳಿಯಲ್ಲಿ ಗರಿಷ್ಠ ಮಳೆಯಾಗಿದ್ದು, ಯಲಹಂಕದಲ್ಲಿ ಅತಿ ಕಡಿಮೆ ಮಳೆಯಾಗಿದೆ. ಮಧ್ಯಾಹ್ನದ ವೇಳೆಗೆ ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ತಾಪಮಾನ ತುಲನಾತ್ಮಕವಾಗಿ ಕಡಿಮೆ ಇತ್ತು. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36.3 ಡಿಗ್ರಿ ಸೆಲ್ಸಿಯಸ್ ಇದ್ದು, ಕಳೆದ ಕೆಲವು ದಿನಗಳಲ್ಲಿ ದಾಖಲಾದ 38 ಡಿಗ್ರಿ ಸೆಲ್ಸಿಯಸ್ನಿಂದ ಸ್ವಲ್ಪ ಕಡಿಮೆಯಾಗಿದೆ.
ನಗರದಲ್ಲಿ ಮೇ 10 ರವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಗರದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 37 ಡಿಗ್ರಿ ಸೆಲ್ಸಿಯಸ್ ಮತ್ತು 24 ಡಿಗ್ರಿ ಸೆಲ್ಸಿಯಸ್ ಇರಲಿದೆ.