ಅಂತರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನವನ್ನು ಪ್ರತಿ ವಷ ಜುಲೈ 3 ರಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಈ ದಿನವನ್ನು ಆಚರಿಸುವ ಹಿಂದಿನ ಮುಖ್ಯ ಉದ್ದೇಶವೆಂದರೆ ಪ್ಲಾಸ್ಟಿಕ್ ಮಾಲಿನ್ಯದ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು. ಏಕೆಂದರೆ ಈ ಜೈವಿಕ ವಿಘಟನೀಯವಲ್ಲದ ಏಕ ಬಳಕೆಯ ಪ್ಲಾಸ್ಟಿಕ್ ಪರಿಸರಕ್ಕೆ ಹೆಚ್ಚು ಹಾನಿಯನ್ನುಂಟು ಮಾಡುತ್ತದೆ.
ನಾವು ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯಗಳು ಮಣ್ಣಿನಲ್ಲಿ ಕರಗದೆ ಸಾವಿರಾರು ವರ್ಷಗಳವರೆಗೆ ಹಾಗೆಯೇ ಉಳಿದುಬಿಡುತ್ತದೆ. ಅಲ್ಲದೆ ಈ ಪ್ಲಾಸ್ಟಿಕ್ಗಳು ಸಮುದ್ರ ಜೀವಿಗಳಿಗೂ ಹಾಗೂ ಭೂಮಿಯ ಮೆಲಿನ ಇತರ ಜೀವಿಗಳಿಗೂ ಹಾನಿಕಾರಕವಾಗಿದೆ. ಹಾಗಾಗಿ ಪ್ರಕೃತಿಯನ್ನು ಸಂರಕ್ಷಿಸುವ ಹಾಗೂ ಪರಿಸರ ಸ್ನೇಹಿ ವಸ್ತುಗಳ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ಲಾಸ್ಟಿಕ್ ಮುಕ್ತದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.
ಅಂತರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನದ ದಿನಾಂಕ ಮತ್ತು ಇತಿಹಾಸ:
ಅಂತರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನವನ್ನು ಪ್ರತಿವರ್ಷ ಜುಲೈ 3 ರಂದು ಆಚರಿಸಲಾಗುತ್ತದೆ. ‘ಬ್ಯಾಗ್ ಫ್ರೀ ವರ್ಲ್ಡ್’ ಅಭಿಯಾನದಿಂದ ಈ ಉಪಕ್ರಮವನ್ನು ಪ್ರಾರಂಭಿಸಲಾಯಿತು. ಇದು ಏಕ ಬಳಕೆಯ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಒಂದು ಆಂದೋಲನವಾಗಿದೆ. 2008 ರ ಜುಲೈ 3ರಂದು ‘ಝೀರೋ ವೇಸ್ಟ್ ಯುರೋಪ್’ ಆಂದೋಲನದ ಸದಸ್ಯರಾದ ರೆಝೆರೊ ಅವರು ಅಂತರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನದ ಆಚರಣೆಗೆ ಚಾಲನೆ ನೀಡಿದರು. ನಂತರ ಪ್ರಪಂಚದಾದ್ಯಂತ ಅನೇಕ ದೇಶಗಳು ಈ ಆಂದೋಲನಕ್ಕೆ ಬೆಂಬಲ ನೀಡಿತು. ಅಂದಿನಿಂದ ಜನರಿಗೆ ಪ್ಲಾಸ್ಟಿಕ್ ನಿಂದ ಉಂಟಾಗುವ ಪರಿಸರ ಹಾನಿಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಅಂತರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಅಂತರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನದ ಈ ವರ್ಷದ ಥೀಮ್:
ಈ ಬಾರಿಯ ಅಂತರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನಕ್ಕೆ ಯಾವುದೇ ನಿರ್ದಿಷ್ಟ ಥೀಮ್ ಇಲ್ಲ. ಆದರೆ ಪ್ರತಿದಿನವು ಪ್ಲಾಸ್ಟಿಕ್ ಮುಕ್ತ ಜಗತ್ತನ್ನು ಮತ್ತು ಸಮರ್ಥನೀಯ ಪರಿಹಾರಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಪ್ಲಾಸ್ಟಿಕ್ ನಮ್ಮ ಪರಿಸರದ ಮೇಲೆ ಪರಿಣಾಮ ಬೀರುತ್ತದೆ:
ಪ್ಲಾಸ್ಟಿಕ್ ಚೀಲಗಳ ಬಳಕೆ ನಮ್ಮ ಪರಿಸರದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತದೆ. ನಾವು ಬಳಕೆ ಮಾಡಿ ಎಸೆಯುವ ಪ್ಲಾಸ್ಟಿಕ್ ಗಳು ಭೂಮಿಯಲ್ಲಿ ಕೊಳೆಯಲು ನೂರಾರು ವರ್ಷ ತೆಗೆದುಕೊಳ್ಳುತ್ತದೆ. ಅದು ಮಾಲಿನ್ಯದ ಪ್ರಮುಖ ಮೂಲವಾಗಿದ್ದು, ಕಾಡು, ಸಮುದ್ರ ಜೀವಿಗಳಿಗೆ ಹಾನಿಯುಂಟುಮಾಡುತ್ತವೆ. ಮತ್ತು ನಮ್ಮ ಸ್ವಚ್ಛ ಪರಿಸರ ವ್ಯವಸ್ಥೆಯ ನಾಶಕ್ಕೆ ಕಾರಣವಾಗುತ್ತದೆ.
ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯಕ್ಕೂ ತೊಂದ್ರೆ
ಪ್ಲಾಸ್ಟಿಕ್ ಹಲವು ರೀತಿಯ ಮೂಲಕ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಪ್ಲಾಸ್ಟಿಕ್ ಎಷ್ಟೇ ವರ್ಷಗಳು ಬಿಟ್ಟರು ಅದು ಕೊಳೆಯುವುದಿಲ್ಲ. ಮತ್ತು ಇದು ಜಲ ಮಾಲಿನ್ಯ, ವಾಯು ಮಾಲಿನ್ಯ ಮತ್ತು ಮಣ್ಣಿನ ಮಾಲಿನ್ಯವನ್ನು ಉಂಟುಮಾಡುತ್ತದೆ. ಇದರಿಂದ ಜನರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಹೆಚ್ಚಿನ ಪ್ರಮಾಣದ ಪ್ಲಾಸ್ಟಿಕ್ ಸಮುದ್ರವನ್ನು ತಲುಪುತ್ತದೆ ಮತ್ತು ಸಮುದ್ರದ ಪ್ರಾಣಿಗಳು ಪ್ಲಾಸ್ಟಿಕ್ನ್ನು ತಿನ್ನುತ್ತವೆ. ಆಹಾರ ಪದಾರ್ಥಗಳ ಪ್ಯಾಕೇಜಿಂಗ್ನಲ್ಲಿ ಅನೇಕ ಬಾರಿ ರಾಸಾಯನಿಕಗಳನ್ನು ಬಳಸುತ್ತಾರೆ. ಇದರಿಂದಾಗಿ ಜನರ ರೋಗನಿರೋಧಕ ಶಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ನಾವು ಪ್ರತಿದಿನ ಮೈಕ್ರೋಪ್ಲಾಸ್ಟಿಕ್ಗಳನ್ನು ತಿನ್ನುತ್ತೇವೆ, ಕುಡಿಯುತ್ತೇವೆ ಮತ್ತು ಉಸಿರಾಡುತ್ತೇವೆ. ಈ ಸಣ್ಣ ಪ್ಲಾಸ್ಟಿಕ್ ಕಣಗಳು ನಮ್ಮ ದೇಹವನ್ನು ಪ್ರವೇಶಿಸಿದ ನಂತರ ನಮ್ಮ ಆರೋಗ್ಯವನ್ನು ಹಾನಿಗೊಳಿಸಬಹುದು. ಪ್ಲಾಸ್ಟಿಕ್ ಉತ್ಪನ್ನಗಳು ರಾಸಾಯನಿಕ ಸೇರ್ಪಡೆಗಳನ್ನು ಹೊಂದಿರುತ್ತವೆ. ಈ ಹಲವಾರು ರಾಸಾಯನಿಕಗಳು ಹಾರ್ಮೋನ್-ಸಂಬಂಧಿತ ಕ್ಯಾನ್ಸರ್, ಬಂಜೆತನ ಮತ್ತು ಎಡಿಎಚ್ಡಿ ಮತ್ತು ಸ್ವಲೀನತೆಯಂತಹ ನರಗಳ ಬೆಳವಣಿಗೆಯ ಅಸ್ವಸ್ಥತೆಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿವೆ.
ಪ್ಲಾಸ್ಟಿಕ್ ಚೀಲಗಳಿಗೆ ಪರ್ಯಾಯ:
ಇಂದು ಮಾರುಕಟ್ಟೆಯಲ್ಲಿ ಪೇಪರ್ ಬ್ಯಾಗ್ಗಳು, ಮರಬಳಕೆ ಮಾಡಬಹುದಾದ ಹತ್ತಿ ಚೀಲಗಳು ಮುಂತಾದ ಹಲವು ಪರ್ಯಾಯಗಳು ಲಭ್ಯವಿದೆ. ಸೆಣಬು ಹತ್ತಿ ಅಥವಾ ಇತರ ವಸ್ತುಗಳಿಂದ ಮಾಡಲಾದ ಮರುಬಳಕೆ ಮಾಡಬಹುದಾದ ಚೀಲಗಳು ಸಾಮಾನ್ಯ ಪರ್ಯಾಯಗಳಲ್ಲಿ ಒಂದಾಗಿದೆ. ಈ ಚೀಲಗಳು ಬಾಳಿಕೆ ಬರುವುದು ಮಾತ್ರವ್ಲದೆ ಅವುಗಳನ್ನು ಮರುಬಳಕೆ ಮಾಡಬಹುದಾಗಿದೆ. ಮತ್ತೊಂದು ಪರ್ಯಾಯವೆಂದರೆ ಕಾಗದದ ಚೀಲಗಳು ಅವುಗಳು ಜೈವಿಕ ವಿಘಟನೀಯ ಮತ್ತು ಮರುಬಳಕೆ ಮಾಡಬಹುದಾದ ಚೀಲಗಳಾಗಿವೆ.