ಬೆಂಗಳೂರು, ಡಿ,08- ಅನಾರೋಗ್ಯದಿಂದ ಬಳಲುತ್ತಿದ್ದ ದಕ್ಷಿಣ ಭಾರತದ ಹೆಸರಾಂತ ಚಿತ್ರ ನಟಿ ಲೀಲಾವತಿ ಅವರ ನಿಧನಕ್ಕೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್ ಆರ್ ಪಾಟೀಲ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡದಲ್ಲಿ ಪ್ರಧಾನವಾಗಿ ನಟಿಸುವುದರೊಂದಿಗೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ ಸುಮಾರು ೬೦೦ ಚಿತ್ರಗಳಲ್ಲಿ ನಟಿಸಿದ್ದ ಅವರ ನಿಧನದಿಂದ ಕನ್ನಡ ಮಾತ್ರವಲ್ಲದೆ, ಭಾರತದ ಚಿತ್ರರಂಗಕ್ಕೂ ತುಂಬಲಾರದ ನಷ್ಟ ಎಂದು ಕಂಬನಿ ಮಿಡಿದಿದ್ದಾರೆ. ಹಿರಿಯ ನಟಿಯನ್ನು ಉಳಿಸಿಕೊಳ್ಳುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ವತಿಯಿಂದಲೇ ಚಿಕಿತ್ಸೆ ಕೊಡಿಸುವುದಾಗಿ ಹೇಳಿದ್ದರು. ಆದರೆ, ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಈಡೇರಲಿಲ್ಲ ಎಂದು ವಿಷಾದಿಸಿದ್ದಾರೆ.
ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ತ್ಯುನ್ನತ ಪ್ರಶಸ್ತಿ ಡಾ. ರಾಜಕುಮಾರ್ ಪ್ರಶಸ್ತಿ, ೧೯೯೯-೨೦೦೦ನೇ ಸಾಲಿನಲ್ಲಿ ‘ತುಮಕೂರು ವಿಶ್ವವಿದ್ಯಾಲಯ’ದ ಗೌರವ ಡಾಕ್ಟರೇಟ್ ಪದವಿಯನ್ನು ೨೦೦೮ರಲ್ಲಿ ಪಡೆದಿರುವುದು ಅವರ ನಟನೆಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದ್ದಾರೆ.
ಕೇವಲ ಚಿತ್ರರಂಗ ಮಾತ್ರವಲ್ಲದೆ, ನೆಲಮಂಗಲದ ಸುತ್ತಮುತ್ತ ವಾಸಿಸುವ ಜನರ ಆರೋಗ್ಯ ಸೇವೆಗಾಗಿ ಸೋಲದೇವನಹಳ್ಳಿಯಲ್ಲಿ ಆಸ್ಪತ್ರೆಯೊಂದನ್ನು ಲೀಲಾವತಿ ಕಟ್ಟಿಸಿ ಸಮಾಜ ಸೇವೆ ಸಲ್ಲಿಸಿದ್ದರು. ಆಗಲಿದ ಆ ಹಿರಿಯ ನಟಿಯ ಆತ್ಮಕ್ಕೆ ದೇವರು ಸದ್ಗತಿ ಪ್ರಪ್ತಾಸಿ,
ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಸಚಿವ ಶರಣ್ ಪ್ರಕಾಶ್ ಪಟೇಲ್ ಪತ್ರಿಕಾ ಪ್ರಕಟಣೆಯಲ್ಲಿ ಪ್ರಾರ್ಥಿಸಿದ್ದಾರೆ.