ಹುಬ್ಬಳ್ಳಿ: ಮೈಕ್ರೋ ಫೈನಾನ್ಸ್ ಗಳು ರಾಜ್ಯವಷ್ಟೇ ಅಲ್ಲ ಇಡೀ ದೇಶದೆಲ್ಲೆಡೆ ಸಮಸ್ಯೆಯಿದೆ. ದೇಶಾದ್ಯಂತ ಮೈಕ್ರೋ ಫೈನಾನ್ಸ್ ಗಳು ಬಂದ್ ಆಗಬೇಕು ಎಂದು ಸಚಿವರಾದ ಸಂತೋಷ ಲಾಡ್ ಖಡಕ್ ಪ್ರತಿಕ್ರಿಯೆ ನೀಡಿದರು. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳ ಹಾವಳಿ ವಿಚಾರವಾಗಿ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುರಾಷ್ಟ್ರೀಯ ಕಂಪನಿಗಳು ಹಾಗೂ ರಾಷ್ಟ್ರೀಯ ಬ್ಯಾಂಕ್ ಗಳು ಹಣ ಸಂಗ್ರಹಿಸಿ ಸ್ವಸಹಾಯ ಸಂಘಗಳ ಮೂಲಕ ಸಾಲ ನೀಡ್ತಾರೆ. ಇದರಿಂದಾಗಿ ಜನರಿಗೆ ಬಡ್ಡಿ ಹೊರೆ ಜಾಸ್ತಿಯಾಗುತ್ತೆ, ಈ ನಿಟ್ಟಿನಲ್ಲಿ ಮೈಕ್ರೋ ಫೈನಾನ್ಸ್ ಸಾಧಕ ಬಾಧಕಗಳನ್ನು ನೋಡಬೇಕು ಸರ್ಕಾರವು ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
ಇನ್ನೂ ಶ್ರೀರಾಮುಲು ಕಾಂಗ್ರೆಸ್ ಬರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶ್ರೀರಾಮುಲು ಅವರು ನಮಗೆ ವೈಯಕ್ತಿಕವಾಗಿ ತುಂಬಾ ಹತ್ತಿರದವರು, ಒಳ್ಳೆಯ ಸ್ನೇಹಿತರು ಶ್ರೀರಾಮುಲು ಕಾಂಗ್ರೆಸ್ ಗೆ ಬಂದರೆ ಅವರನ್ನು ವೈಯಕ್ತಿಕವಾಗಿ ಸ್ವಾಗತಿಸುತ್ತೇನೆ. ಅವರು ಕಾಂಗ್ರೆಸ್ ಗೆ ಬಂದರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ ಎಂದ ಅವರು ಕಾಂಗ್ರೆಸ್ ಬರುವ ವಿಚಾರ ಹೈಕಮಾಂಡ್ ಮಟ್ಟದಲ್ಲಿ ಯಾವ ಚರ್ಚೆಯಾಗಿದೆಯೋ ಗೊತ್ತಿಲ್ಲ. ಆದರೆ ಅವರು ಪಕ್ಷಕ್ಕೆ ಬಂದರೆ ವೈಯಕ್ತಿಕವಾಗಿ ಸ್ವಾಗತಿಸುತ್ತೇನೆಂದು ಎಂದರು.
ವಿಜಯಪುರದಲ್ಲಿ ಇಟ್ಟಿಗೆ ಬಟ್ಟಿ ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು, ಆ ರೀತಿಯಾಗಿ ಅಮಾನವೀಯವಾಗಿ ನಡೆದುಕೊಳ್ಳುವುದು ಸರಿಯಲ್ಲ. ಈಗಾಗಲೇ ಆರೋಪಿಗಳನ್ನು ಬಂಧಿಸಿ ಕ್ರಮಕೈಗೊಳ್ಳಲಾಗಿದೆ ಎಂದರು.