ಮಂಡ್ಯ: ಕೊರೋನಾ ಕಾಲದಲ್ಲಿ ರೆಮ್ಡಿಸಿವರ್ ಎಂಬ ಇಂಜೆಕ್ಷನ್ಗೆ ಜನರು ಪರದಾಡುತ್ತಿದ್ದರು. ಈ ಇಂಜೆಕ್ಷನ್ಗೆ ಖಾಸಗಿ ಆಸ್ಪತ್ರೆಯಲ್ಲಿ 1 ರಿಂದ 2 ಲಕ್ಷದವರೆಗೆ ತೆಗೆದುಕೊಂಡಿದ್ದಾರೆ. ಇದೀಗ 40 ಲಕ್ಷ ಮೌಲ್ಯದ ಇದೆ ರೆಮ್ಡಿಸಿವರ್ ಮೆಡಿಸನ್ ಎಕ್ಸ್ಪೆರಿಯಾಗಿ ಮಂಡ್ಯದ ಮಿಮ್ಸ್ನ ಔಷಧಿ ಉಗ್ರಾಣದಲ್ಲಿ ಇರೋದು ಕಂಡುಬಂದಿದೆ.
Charmadi Ghat: ವಾಹನ ಸವಾರರೇ ಎಚ್ಚರ: 2 ಬೃಹತ್ ಬಂಡೆಗಳು ಕೂದಲೆಳೆ ಅಂತರದಲ್ಲಿ ನಿಂತಂತಿದೆ
ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಅವಧಿಗೆ ಮೀರಿನ ಲಕ್ಷಾಂತರ ರೂಪಾಯಿಯ ಮೆಡಿಸಿನ್ ಇದ್ದು, ಅಧಿಕಾರಿಗಳು ಏಜೆನ್ಸಿಯವರೊಂದಿಗೆ ಮೆಡಿಕಲ್ ಮಾಫಿಯಾದಲ್ಲಿ ಭಾಗಿಯಾಗಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಮಾಡುತ್ತಿದ್ದಾರೆ ಎಂದು ಕೇಶವಮೂರ್ತಿ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದರು. ದೂರಿನ ಅನ್ವಯ ಮಿಮ್ಸ್ನ ಔಷಧಿ ಉಗ್ರಾಣಕ್ಕೆ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ನೇತೃತ್ವದಲ್ಲಿ ರೇಡ್ ಮಾಡಲಾಗಿದೆ.
ಈ ರೇಡ್ನಲ್ಲಿ ಪ್ರಮುಖವಾಗಿ ಕೊರೋನಾ ಕಾಲದಲ್ಲಿ ಬಹು ಬೇಡಿಕೆ ಇದ್ದ ರೆಮ್ಡಿಸಿವರ್ ಇಂಜೆಕ್ಷನ್ ಎಕ್ಸ್ಪೆರಿಯಾಗಿ ಇರೋದು ಕಂಡು ಬಂದಿದೆ. ಒಂದಲ್ಲಾ ಎರಡಲ್ಲಾ ಬರೋಬ್ಬರಿ 40 ಲಕ್ಷ ಮೌಲ್ಯದ ರೆಮ್ಡಿಸಿವರ್ ಇಂಜೆಕ್ಷನ್ ಅವಧಿ 2022ರಲ್ಲಿಯೇ ಮುಕ್ತಾಯವಾಗಿದೆ. ಕೊರೋನಾ ಸಂದರ್ಭದಲ್ಲಿ ಈ ಇಂಜೆಕ್ಷನ್ ಕೇಳಿದ್ರೆ ಮಿಮ್ಸ್ನ ಅಧಿಕಾರಿ ವರ್ಗ ನಮ್ಮ ಬಳಿ ಸ್ಟಾಕ್ ಇಲ್ಲ ಎಂಬ ಮಾತನ್ನು ಹೇಳ್ತಾ ಇತ್ತು. ಆದರೆ ಇದೀಗ ಅದೇ ರೆಮ್ಡಿಸಿವರ್ ಇಂಜೆಕ್ಷನ್ ಅಪಾರ ಮಟ್ಟದಲ್ಲಿ ಅವಧಿ ಮುಕ್ತಾಯಗೊಂಡಿದೆ.
ಕೇವಲ ರೆಮ್ಡಿಸಿವರ್ ಮಾತ್ರವಲ್ಲ ಬೇರೆ ಬೇರೆ ರೋಗಗಳಿಗೆ ನೀಡುವ ಔಷಧಿ, ಮಾತ್ರೆ, ಇಂಜೆಕ್ಷನ್ನ ಅವಧಿಯೂ ಮುಕ್ತಾಯವಾಗಿದೆ. ಇವುಗಳ ಮೌಲ್ಯವು ಲಕ್ಷಾಂತರ ರೂಪಾಯಿ ಆಗಿವೆ. ಈ ಅಪಾರ ಪ್ರಮಾಣ ನಷ್ಟ ಸರ್ಕಾರಕ್ಕೆ ಉಂಟಾಗಿದೆ.
ಏನಿದು ಮೆಡಿಕಲ್ ಮಾಫಿಯಾ
ಮಂಡ್ಯದ ಮಿಮ್ಸ್ ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಒಂದಷ್ಟು ಮೆಡಿಸಿನ್ ಏಜೆನ್ಸಿಗಳು ಔಷಧಿ, ಇಂಜೆಕ್ಷನ್, ಮಾತ್ರೆಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಸರಬರಾಜು ಮಾಡುತ್ತವೆ. ಈ ಸರಬರಾಜು ಆದ ಮೆಡಿಸಿನ್ಗಳ ಅವಧಿ ಮುಕ್ತಾಯದ ಎರಡು ಅಥವಾ ಮೂರು ತಿಂಗಳ ಮುಂಚೆಯೇ ಆಯಾ ಏಜೆನ್ಸಿ ಅವರಿಗೆ ಆ ಮೆಡಿಸಿನ್ನ್ನು ವಾಪಸ್ಸು ನೀಡಿದ್ರೆ, ಅವರು ಹೊಸ ಮೆಡಿಸಿನ್ನ್ನು ನೀಡ್ತಾರೆ. ಅಲ್ಲಿಗೆ ಯಾವುದೇ ಹಣ ವ್ಯಯವಾಗುವುದಿಲ್ಲ.
ಈ ಕೆಲಸವನ್ನು ಸಂಬಂಧ ಪಟ್ಟ ಅಧಿಕಾರಿಗಳು ಮಾಡದೇ ಏಜೆನ್ಸಿ ಅವರೊಂದಿಗೆ ಒಪ್ಪಂದ ಮಾಡಿಕೊಂಡು ಮೆಡಿಸಿನ್ಗಳು ಅವಧಿ ಮುಗಿಯುವವರೆಗೆ ತಮ್ಮಲ್ಲೇ ಇಟ್ಟುಕೊಳ್ಳುತ್ತಾರೆ. ಈಗ ಆ ಮೆಡಿಸಿನ್ಗಳನ್ನು ಸಂಬಂಧ ಪಟ್ಟ ಏಜೆನ್ಸಿ ವಾಪಸ್ಸು ಪಡೆಯುವುದಿಲ್ಲ. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕತ್ತರಿ ಬೀಳ್ತಾ ಇದೆ.
ಇನ್ನೊಂದೆಡೆ ಡ್ರಗ್ಗೆ ಸಂಬಂಧಿಸಿದ ಅಧಿಕಾರಿಗಳು ಮೊದಲೆ ಏಜೆನ್ಸಿ ಅವರೊಂದಿಗೆ ಮಾತಾಡಿಕೊಂಡು ಎರಡು ತಿಂಗಳಲ್ಲಿ ಅವಧಿ ಮುಗಿಯುವ ಮೆಡಿಸಿನ್ನ್ನು ಕೊಡಲು ಹೇಳ್ತಾರೆ. ಎರಡು ತಿಂಗಳು ಅವಧಿ ಮುಗಿಯುವ ಮೆಡಿಸಿನ್ಗೆ ಏಜೆನ್ಸಿ ಅವರು ಬಾರಿ ರಿಯಾಯಿತಿಯನ್ನು ಕೊಡ್ತಾರೆ. ಉದಾಹರಣೆಗೆ 10 ರೂಪಾಯಿ ಒಂದು ಮಾತ್ರೆ ಎರಡು ತಿಂಗಳಲ್ಲಿ ಅವಧಿ ಮುಗಿಯುತ್ತಿದ್ರೆ, ಅದಕ್ಕೆ ಕೇವಲ ಮೂರು ರೂಪಾಯಿಯನ್ನು ಬಿಲ್ ಮಾಡ್ತಾರೆ. ಈ ಮೆಡಿಸಿನ್ನ್ನು ಖರೀದಿ ಮಾಡುವ ಅಧಿಕಾರಿಗಳು ಏಜೆನ್ಸಿ ಅವರಿಗೆ 3 ರೂಪಾಯಿಯನ್ನು ನೀಡಿ ಸರ್ಕಾರಕ್ಕೆ 10 ರೂಪಾಯಿ ಬಿಲ್ ತೋರಿಸುತ್ತಾರೆ. ಆ ಮೂಲಕ ಮೆಡಿಸಿನ್ ಮಾಫಿಯಾ ಮೂಲಕ ಲಕ್ಷಾಂತರ ರೂಪಾಯಿ ಹಣ ಸರ್ಕಾರದ ಜೇಬಿಗೆ ಕತ್ತರಿ ಬೀಳ್ತಾ ಇದೆ.