ಬೀಜಿಂಗ್: ಪ್ರಧಾನಿ ಮೋದಿ ವಿರುದ್ಧ ಹಾಗೂ ಭಾರತದ ವಿರುದ್ಧ ತಮ್ಮ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ ನಡುವೆಯೇ ಭಾರತದಲ್ಲಿ ಮಾಲ್ಡೀವ್ಸ್ ವಿರುದ್ಧ ಬೃಹತ್ ಬಹಿಷ್ಕಾರ ಅಭಿಯಾನ ಆರಂಭವಾಗಿದೆ. ಈ ನಡುವೆ ಹೆಚ್ಚಿನ ಪ್ರವಾಸಿಗರನ್ನು ದ್ವೀಪ ರಾಷ್ಟ್ರಕ್ಕೆ ಕಳುಹಿಸುವಂತೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಮಂಗಳವಾರ ಚೀನಾಗೆ ಮನವಿ ಮಾಡಿದ್ದಾರೆ.
2023 ರಲ್ಲಿ ಮಾಲ್ಡೀವ್ಸ್ ದ್ವೀಪಸಮೂಹಕ್ಕೆ ಭಾರತವೇ ಅಗ್ರ ಪ್ರವಾಸಿ ಮಾರುಕಟ್ಟೆಯಾಗಿದ್ದು, ಆದರೆ ಮೂವರು ಸಚಿವರ ಹೇಳಿಕೆಗಳ ಬಳಿಕ ಭಾರತದಲ್ಲಿ #BoycottMaldives ಅಭಿಯಾನ ಜೋರಾಗಿದೆ. ಅನೇಕರು ಮಾಲ್ಡೀವ್ಸ್ ಪ್ರವಾಸ ಕ್ಯಾನ್ಸಲ್ ಮಾಡಿರೋದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
South Korea: ನಾಯಿ ಮಾಂಸ ಸೇವನೆಗೆ ರದ್ದು : ದಕ್ಷಿಣ ಕೊರಿಯಾ ಸಂಸತ್ತಿನಲ್ಲಿ ಮಸೂದೆ ಅಂಗೀಕಾರ!
ಇನ್ನು, ಪ್ರಸ್ತುತ ಚೀನಾಕ್ಕೆ 5 ದಿನಗಳ ಭೇಟಿಯಲ್ಲಿರೋ ಮೊಹಮ್ಮದ್ ಮುಯಿಝು ಚೀನಾ ಪರವಾಗಿದ್ದು, ಭಾರತ ವಿರೋಧಿಯಾಗಿದ್ದಾರೆ. ಮಂಗಳವಾರದಂದು ಫುಜಿಯಾನ್ ಪ್ರಾಂತ್ಯದಲ್ಲಿ ಮಾಲ್ಡೀವ್ಸ್ ಬ್ಯುಸಿನೆಸ್ ಫೋರಮ್ಗೆ ನೀಡಿದ ಭಾಷಣದಲ್ಲಿ ಮುಯಿಝು ತನ್ನ ಭೇಟಿಯ ಎರಡನೇ ದಿನದಂದು ಚೀನಾವನ್ನು ದ್ವೀಪ ರಾಷ್ಟ್ರದ “ಹತ್ತಿರದ” ಮಿತ್ರ ಎಂದು ಕರೆದರು.
ಚೀನಾ ನಮ್ಮ ಹತ್ತಿರದ ಮಿತ್ರರಾಷ್ಟ್ರಗಳಲ್ಲಿ ಒಂದಾಗಿದೆ ಮತ್ತು ಅಭಿವೃದ್ಧಿ ಪಾಲುದಾರರಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ಅಲ್ಲದೆ, 2014 ರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಪ್ರಾರಂಭಿಸಿದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (BRI) ಯೋಜನೆಗಳನ್ನು ಶ್ಲಾಘಿಸಿದರು. ಈ ಮೂಲಕ ಮಾಲ್ಡೀವ್ಸ್ ಇತಿಹಾಸದಲ್ಲಿ ಕಂಡ ಅತ್ಯಂತ ಮಹತ್ವದ ಮೂಲಸೌಕರ್ಯ ಯೋಜನೆಗಳನ್ನು ತಲುಪಿಸಿದ್ದಾರೆ ಎಂದೂ ತಮ್ಮ ಭಾಷಣದಲ್ಲಿ ಹೇಳಿದರು.
ಹಾಗೂ, ಈ ವೇಳೆ ಮಾಲ್ಡೀವ್ಸ್ಗೆ ತನ್ನ ಪ್ರವಾಸಿಗರ ಹರಿವನ್ನು ಹೆಚ್ಚಿಸಲು ಚೀನಾಗೆ ಮನವಿ ಮಾಡಿದರು. ಚೀನಾ ಕೋವಿಡ್ ಪೂರ್ವದಲ್ಲಿ ನಮ್ಮ (ಮಾಲ್ಡೀವ್ಸ್ನ) ನಂ. 1 ಮಾರುಕಟ್ಟೆಯಾಗಿತ್ತು. ಮತ್ತು ಚೀನಾ ಈ ಸ್ಥಾನವನ್ನು ಮರಳಿ ಪಡೆಯಲು ನಾವು ಪ್ರಯತ್ನಗಳನ್ನು ತೀವ್ರಗೊಳಿಸಬೇಕೆಂಬುದು ನನ್ನ ವಿನಂತಿಯಾಗಿದೆ ಎಂದು ಮೊಹಮ್ಮದ್ ಮುಯಿಝು ಹೇಳಿದ್ದಾರೆಂದು ವರದಿಯಾಗಿದೆ. ಹಿಂದೂ ಮಹಾಸಾಗರದ ದ್ವೀಪದಲ್ಲಿ ಸಮಗ್ರ ಪ್ರವಾಸೋದ್ಯಮ ವಲಯವನ್ನು ಅಭಿವೃದ್ಧಿಪಡಿಸಲು ಉಭಯ ದೇಶಗಳು 50 ಮಿಲಿಯನ್ ಡಾಲರ್ ಯೋಜನೆಗೆ ಸಹಿ ಹಾಕಿವೆ ಎಂದು ಮಾಲ್ಡೀವ್ಸ್ ಮಾಧ್ಯಮ ವರದಿ ಮಾಡಿದೆ.