ಧೋನಿ ಸಿಡಿಲಬ್ಬರಕ್ಕೆ ಡಿವಿಲಿಯರ್ಸ್ ದಾಖಲೆ ಧೂಳಿಪಟವಾಗಿದೆ. ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ಕೆ ತಂಡ 20 ಓವರ್ಗಳಲ್ಲಿ 177 ರನ್ ಕಲೆಹಾಕಿದೆ.
ತಂಡದ ಪರ ರವೀಂದ್ರ ಜಡೇಜಾ 57 ರನ್ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರೆ, ಕೆಳಕ್ರಮಾಂಕದಲ್ಲಿ ಮೊಯಿನ್ ಅಲಿ 30 ರನ್ಗಳ ಕಾಣಿಕೆ ನೀಡಿದರು. ಇವರ ಜೊತೆಗೆ ಸ್ಫೋಟಕ ಇನ್ನಿಂಗ್ಸ್ ಆಡಿದ ಮಾಜಿ ನಾಯಕ ಧೋನಿ ಕೂಡ 28 ರನ್ ಬಾರಿಸಿದರು. ಇದರೊಂದಿಗೆ ಐಪಿಎಲ್ನಲ್ಲಿ ನೂತನ ಮೈಲಿಗಲ್ಲನ್ನು ಸ್ಥಾಪಿಸಿದರು.
ಈ ಪಂದ್ಯದಲ್ಲಿ ಕೇವಲ 9 ಎಸೆತಗಳನ್ನು ಎದುರಿಸಿದ ಧೋನಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 28 ರನ್ ಕಲೆಹಾಕಿದರು. ಇದರೊಂದಿಗೆ ಧೋನಿ ಐಪಿಎಲ್ನಲ್ಲಿ ವಿಕೆಟ್ಕೀಪರ್ ಆಗಿ 5000 ರನ್ ಪೂರೈಸಿದ ಏಕೈಕ ಭಾರತೀಯ ಆಟಗಾರ ಎನಿಸಿಕೊಂಡರು.
ಇದರೊಂದಿಗೆ ಧೋನಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ದಾಖಲೆಯನ್ನೂ ಮುರಿದಿದ್ದಾರೆ. ವಾಸ್ತವವಾಗಿ ಎಬಿ ಡಿವಿಲಿಯರ್ಸ್ ಐಪಿಎಲ್ನಲ್ಲಿ 5162 ರನ್ ಗಳಿಸಿದ್ದರು. ಇದೀಗ ಧೋನಿ ರನ್ಗಳ ವಿಚಾರದಲ್ಲಿ ಡಿವಿಲಿಯರ್ಸ್ರನ್ನು ಹಿಂದಿಕ್ಕಿದ್ದಾರೆ.
ಪ್ರಸ್ತುತ ಐಪಿಎಲ್ನಲ್ಲಿ ಸಕ್ರಿಯರಾಗಿರುವ ಧೋನಿ ಇದುವರೆಗೆ ಆಡಿರುವ 257 ಪಂದ್ಯಗಳ 223 ಇನ್ನಿಂಗ್ಸ್ಗಳಲ್ಲಿ 5169 ರನ್ ಗಳಿಸಿದ್ದಾರೆ. ಎಬಿ ಡಿವಿಲಿಯರ್ಸ್ ಇಲ್ಲಿಯವರೆಗೆ 5000 ರನ್ ಪೂರೈಸಿದ ಏಕೈಕ ವಿಕೆಟ್ ಕೀಪರ್ ಆಗಿದ್ದರು. ಇದೀಗ ಈ ಪಟ್ಟಿಗೆ ಧೋನಿ ಸೇರಿಕೊಂಡಿದ್ದಾರೆ.