ಕೇಸರಿಯು ನಿಜವಾಗಿಯೂ ಚಿನ್ನದಂತಹ ಔಷಧೀಯ ಗುಣಗಳನ್ನು ಹೊಂದಿದೆ. ಬಣ್ಣ, ರುಚಿ ಮತ್ತು ವಾಸನೆಯೊಂದಿಗೆ ಅಪರೂಪದ ಮಸಾಲೆಯಾಗಿದ್ದು, ಹಾಗಾಗಿ ಇದು ಎಲ್ಲರ ನೆಚ್ಚಿನ ಕೆಂಪು ಚಿನ್ನವೇ ಸರಿ. ಗರ್ಭಿಣಿಯು ಕೇಸರಿ ಹಾಲು ಕುಡಿಯುವುದರಿಂದ ಹುಟ್ಟುವ ಮಗು ಬೆಳ್ಳಗಿರುತ್ತದೆ ಎಂಬ ನಂಬಿಕೆ ವ್ಯಾಪಕವಾಗಿ ಚಾಲ್ತಿಯಲ್ಲಿದೆ. ಇದು ನಿಜವೇ? ಒಂದೊಮ್ಮೆ ನಿಜವಲ್ಲದಿದ್ದರೆ, ಕೇಸರಿ ಹಾಲು ಕುಡಿಯಬೇಕೆ? ಇಲ್ಲಿದೆ ಉತ್ತರ.
ಕೇಸರಿ ವರ್ಣವರ್ಧಕವೇ?
ಮಗುವಿನ ಬಣ್ಣ ನಿರ್ಧಾರವಾಗುವುದು ತಂದೆ-ತಾಯಿಗಳಿಂದ ಬಂದ ವಂಶವಾಹಿಗಳ ಮೇಲೆ; ತಿನ್ನುವ-ಕುಡಿಯುವ ಆಹಾರದ ಮೇಲಲ್ಲ. ಹಾಗಾಗಿ ತಾಯಿ ಕೇಸರಿ ಹಾಲು ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಮಗು ಆ ಹಾಲಿನಲ್ಲಿ ಮಿಂದು ಬರುತ್ತದೆ ಎಂದು ಭಾವಿಸುವುದು ತಪ್ಪು. ಮಗುವಿನ ಬಣ್ಣ, ಕಣ್ಣು, ಮೂಗು, ಕೂದಲು, ಉಗುರು ಮುಂತಾದ ದೈಹಿಕ ಲಕ್ಷಣಗಳೆಲ್ಲ ನಿರ್ಧಾರವಾಗುವುದು ವಂಶವಾಹಿಗಳ ಮೇಲೆ.
ಹಾಗಾದರೆ ಒಂಬತ್ತು ತಿಂಗಳು ಲೀಟರುಗಟ್ಟಲೆ ಕೇಸರಿ ಹಾಲು ಕುಡಿಯುವುದು ಸುಮ್ಮನೆ ದಂಡ! ಅಲ್ಲವೇಅಲ್ಲ. ಕೇಸರಿ ಸೇವನೆಯ ಜಾದೂದಿಂದ ಮಗು ಬೆಳ್ಳಗಾಗುವುದಿಲ್ಲ ಎಂಬುದನ್ನು ಬಿಟ್ಟರೆ, ಸೇವಿಸಿದ್ದು ವ್ಯರ್ಥವಾಗುವುದಿಲ್ಲ. ಗರ್ಭಾವಸ್ಥೆಯಲ್ಲಿ ಕೇಸರಿಯನ್ನು ಮಿತವಾಗಿ ಸೇವಿಸುವುದು ತಾಯಿ-ಶಿಶು ಇಬ್ಬರಿಗೂ ಒಳ್ಳೆಯದು. ಇದರಿಂದ ಇಬ್ಬರ ಸ್ವಾಸ್ಥ್ಯಕ್ಕೆ ಹಲವು ಬಗೆಯಲ್ಲಿ ಪ್ರಯೋಜನಗಳಿವೆ.
ಉತ್ಕರ್ಷಣ ನಿರೋಧಕಗಳು
ಕೇಸರಿಯಲ್ಲಿ ಸ್ಯಾಫ್ರನಾಲ್, ಪೈಕ್ರೋಕ್ರೋಸಿನ್ ಮುಂತಾದ ಉತ್ಕರ್ಷಣ ನಿರೋಧಕಗಳಿವೆ. ಇವು ದೇಹದಲ್ಲಿನ ಉರಿಯೂತ ಶಮನ ಮಾಡಲು ನೆರವಾಗುತ್ತವೆ. ಗರ್ಭಾವಸ್ಥೆಯನ್ನು ಸಂತಸದಿಂದ ದಾಟುವುದಕ್ಕೆ ಬೇಕಾದ ದೈಹಿಕ ಮತ್ತು ಮಾನಸಿಕ ಕ್ಷಮತೆಯನ್ನು ಇರಿಸಿಕೊಳ್ಳುವುದಕ್ಕೆ ಇಂಥ ಉರಿಯೂತ ಶಾಮಕಗಳು ಅಗತ್ಯ.
ಪಚನಕಾರಿ
ಗರ್ಭಾವಸ್ಥೆಯಲ್ಲಿ ಜೀರ್ಣಾಂಗಗಳು ಕೆಲವೊಮ್ಮೆ ಕಷ್ಟ ಕೊಡುತ್ತವೆ. ಹುಳಿತೇಗು, ಎದೆಯುರಿ, ಮಲಬದ್ಧತೆ ಮುಂತಾದ ತೊಂದರೆಗಳು ಬಹಳಷ್ಟು ಮಹಿಳೆಯರಲ್ಲಿ ಕಾಣುತ್ತದೆ. ಕೇಸರಿ ಜೀರ್ಣಾಂಗಗಳನ್ನು ಉದ್ದೀಪಿಸುತ್ತದೆ. ಇದರಿಂದ ಕೇಸರಿ ಹಾಲಿನ ಸೇವನೆಯು ಗರ್ಭಿಣಿಯರಿಗೆ ಲಾಭದಾಯಕ. ಇದನ್ನು ಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ಬೆಳಗಿನ ಹೊತ್ತು ಕಾಡುವ ವಾಂತಿಯನ್ನೂ ನಿಯಂತ್ರಿಸಬಹುದು.
ಮೂಡ್ ಸುಧಾರಣೆ
ತಾಯಿ ಖುಷಿಯಲ್ಲಿದ್ದರೆ, ಒಳಗಿರುವ ಮಗುವೂ ಖುಷಿಯಲ್ಲಿರುತ್ತದೆ. ಹೌದು, ತಾಯಿಯ ಮಾನಸಿಕ ಸ್ಥಿತಿ-ಗತಿಗಳು ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವುದು ನಿಜ. ಕೇಸರಿಯಲ್ಲಿ ಒತ್ತಡ ಶಾಮಕ ಗುಣಗಳಿವೆ. ಇದರಿಂದ ಮನಸ್ಸನ್ನು ಸಂತೋಷವಾಗಿರಿಸಿ, ಶಿಶುವಿನ ಮೇಲೆ ಧನಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ.
ನೋವು ಶಮನ
ಹೊಟ್ಟೆಯಲ್ಲಿರುವ ಕೂಸು ಬೆಳೆಯುತ್ತಿದ್ದಂತೆ, ಅದಕ್ಕೆ ಬೇಕಾದ ಜಾಗವನ್ನು ಒದಗಿಸುವುದಕ್ಕೆ ದೇಹದ ಬಹಳಷ್ಟು ಅಂಗಗಳು ಒಂದಕ್ಕೊಂದು ಒತ್ತರಿಸಿಕೊಂಡು ಸ್ಥಳ ಬಿಟ್ಟುಕೊಡುವುದು ಸ್ವಾಭಾವಿಕ. ಈ ದಿನಗಳಲ್ಲಿ ಬೆನ್ನು, ಹೊಟ್ಟೆ ಮತ್ತು ಕಾಲುಗಳಲ್ಲಿ ನೋವು ಕಾಡುವುದು ಸಾಮಾನ್ಯ. ಕೇಸರಿಗೆ ಲಘುವಾದ ನೋವು ನಿವಾರಕ ಗುಣವಿದ್ದು, ಇಂಥ ನೋವುಗಳನ್ನು ಕ್ರಮೇಣ ಕಡಿಮೆ ಮಾಡಬಲ್ಲದು.
ಕಬ್ಬಿಣದಂಶ
ಗರ್ಭಾವಸ್ಥೆಯಲ್ಲಿ ಕಬ್ಬಿಣದ ಮಾತ್ರೆಗಳನ್ನು ಸೇವಿಸಲು ವೈದ್ಯರು ಸೂಚಿಸುವುದಿದೆ. ರಕ್ತಹೀನತೆ ಕಾಡದಂತೆ ಮಾಡುವ ಕ್ರಮವಿದು. ಇಂಥ ಪೂರಕಗಳ ಜೊತೆಗೆ ಕೇಸರಿಯನ್ನೂ ಮಿತವಾಗಿ ಸೇವಿಸಬಹುದೇ ಎಂಬುದನ್ನು ವೈದ್ಯರನ್ನೇ ಕೇಳಬೇಕಾಗುತ್ತದೆ. ಕೇಸರಿಯಲ್ಲಿ ಕಬ್ಬಿಣದಂಶವೂ ಇದ್ದು, ಹಿಮೋಗ್ಲೋಬಿನ್ ಮಟ್ಟ ಕುಸಿಯದಂತೆ ಮಾಡಲು ಇದು ಸಹಕಾರಿ.
ಕಣ್ತುಂಬಾ ನಿದ್ದೆ
ಹಾರ್ಮೋನಿನ ವ್ಯತ್ಯಾಸಗಳು, ಹಿಗ್ಗುತ್ತಿರುವ ಹೊಟ್ಟೆ, ಹೇಳಲಾರದ ತೊಂದರೆಗಳೆಲ್ಲ ಸೇರಿ ಗರ್ಭಿಣಿಯರಿಗೆ ರಾತ್ರಿಯ ನಿದ್ದೆ ಬಾರದಿರಬಹುದು. ಇದರಿಂದಾಗಿ ಬೆಳಗ್ಗೆ ಏಳುತ್ತಿದ್ದಂತೆ ಚೇತೋಹಾರಿ ಎನಿಸದೆ, ಸುಸ್ತು, ಸಂಕಟ ಮುಂದುವರಿಯುತ್ತದೆ. ಇದಕ್ಕೆ ಬದಲು, ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಕೇಸರಿ ಹಾಲು ಕುಡಿದರೆ ರಾತ್ರಿಯ ನಿದ್ದೆ ಸುಧಾರಿಸುತ್ತದೆ. ಮಾನಸಿಕ ಒತ್ತಡವನ್ನು ಶಮನ ಮಾಡಿ, ನಿದ್ದೆ ಬರಿಸುವ ಸಾಮರ್ಥ್ಯ ಕೇಸರಿಗಿದೆ.
ಇದಲ್ಲದೆ, ಪ್ರತಿರೋಧಕ ಶಕ್ತಿಯನ್ನು ಪ್ರಚೋದಿಸುವುದಕ್ಕೂ ಕೇಸರಿ ಸಹಕಾರಿ. ಮಗುವಿನ ಚರ್ಮದ ಮೇಲೆ ಹೆಚ್ಚಿನ ಪರಿಣಾಮ ಬೀರದಿದ್ದರೂ, ತಾಯಿಯ ತ್ವಚೆ ಸುಧಾರಿಸಬಹುದು. ಆದರೆ ಇದನ್ನು ಅತಿಯಾಗಿ ಸೇವಿಸುವಂತಿಲ್ಲ. ಏನು, ಎಷ್ಟು ಎಂಬುದನ್ನೆಲ್ಲ ತಜ್ಞರಲ್ಲಿ ಸಲಹೆ ಕೇಳುವುದು ಸೂಕ್ತ.