ಬೇಸಿಗೆ ಎಂದ ತಕ್ಷಣ ನಮಗೆ ನೆನಪಿಗೆ ಬರುವ ಹಣ್ಣು ಕಲ್ಲಂಗಡಿ. ಸುಲಭವಾಗಿ ಜೀರ್ಣವಾಗುವ ಈ ಹಣ್ಣು ದೇಹಕ್ಕೆ ಸಾಕಷ್ಟು ತೇವಾಂಶವನ್ನು ಒದಗಿಸುತ್ತದೆ ಮತ್ತು ಶಾಖವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಬೇಸಿಗೆಯಲ್ಲಿ ಅನೇಕ ಜನರು ಇದನ್ನು ಹೆಚ್ಚಾಗಿ ತಿನ್ನುತ್ತಾರೆ. ಕೆಲವರು ಕಲ್ಲಂಗಡಿ ಹಣ್ಣನ್ನು ಪೂರ್ತಿಯಾಗಿ ತಿನ್ನುವುದಿಲ್ಲ, ಒಂದು ಭಾಗವನ್ನು ಫ್ರಿಡ್ಜ್ ನಲ್ಲಿಟ್ಟು ನಂತರ ತಿನ್ನುತ್ತಾರೆ.
ಬೇಸಿಗೆಯಲ್ಲಿ ಸಿಗುವ ಕಲ್ಲಂಗಡಿ ಹಣ್ಣನ್ನು ಖರೀದಿಸುವಾಗ ಅದರ ಮೇಲ್ಭಾಗದ ಚುಕ್ಕೆ, ಬಣ್ಣ, ತೂಕ, ಶಬ್ದ ಮತ್ತು ಹಳದಿ ಬಣ್ಣವನ್ನು ಗಮನಿಸಬೇಕು. ಇವುಗಳನ್ನು ಗಮನದಲ್ಲಿಟ್ಟುಕೊಂಡು ಕಲ್ಲಂಗಡಿ ಖರೀದಿಸಿದರೆ ಸಿಹಿಯಾದ ಹಣ್ಣು ನಿಮ್ಮದಾಗುತ್ತದೆ.
1.ಮೇಲ್ಭಾಗದ ಚುಕ್ಕೆ ಗಮನಿಸೋದು
ಕಲ್ಲಂಗಡಿ ಹಣ್ಣಿನ ಮೇಲೆ ತಿಳಿ ಹಸಿರು ಮತ್ತು ಗಾಢ ಹಸಿರು ಬಣ್ಣದ ಲೈನ್ಗಳಿರುತ್ತವೆ. ಈ ಲೈನುಗಳೆಲ್ಲವೂ ಸಂಧಿಸುವ ಸ್ಥಳ ಅಂದ್ರೆ ತುತ್ತತುದಿಯನ್ನು ಸೂಕ್ಷ್ಮವಾಗಿ ಗಮನಿಸಿ. ಈ ಲೈನುಗಳ ಸಂಧಿಸುವ ಬಿಂದು ಚಿಕ್ಕ ಮತ್ತು ಒಣಗಿರಬೇಕು. ಹಾಗೆ ತುದಿಯ ಅಂಚಿನ ಬಳ್ಳಿಯೂ ಕೈಗೆ ಸಿಗುವಂತಿರಬೇಕು. ಈ ರೀತಿಯಾಗಿರುವ ಹಣ್ಣು ಬಳ್ಳಿಯಲ್ಲಿ ಪೂರ್ಣವಾಗಿ ಪಕ್ವವಾಗಿದೆ ಎಂದರ್ಥ.
2. ಕಲ್ಲಂಗಡಿ ಬಣ್ಣ
ಸಂಪೂರ್ಣವಾಗಿ ಪಕ್ವವಾಗಿರುವ ಕಲ್ಲಂಗಡಿಯ ಮೇಲ್ಭಾಗ ಗಾಢವಾದ ಹಸಿರು ಬಣ್ಣ ಹೊಂದಿರುತ್ತವೆ. ಮಸುಕಾದ ಅಥವಾ ತಿಳಿ ಹಸಿರು ಬಣ್ಣದ ಲೈನುಗಳನ್ನು ಹೊಂದಿರುವ ಹಣ್ಣನ್ನು ಅವಧಿಗೆ ಮುನ್ನವೇ ಕಟಾವು ಮಾಡಿ, ಗೋದಾಮಿನಲ್ಲಿರಿಸಿ ಹಣ್ಣು ಮಾಡಲಾಗಿರುತ್ತದೆ.
ತೂಕ ಗಮನಿಸಿ
ಪಕ್ವವಾಗಿರುವ ಕಲ್ಲಂಗಡಿ ಹಣ್ಣು ತೂಕವನ್ನು ಹೊಂದಿರುತ್ತದೆ. ಪಕ್ಷವಾದ ಕಲ್ಲಂಗಡಿ ಹೆಚ್ಚು ನೀರಿನಂಶ ಹೊಂದಿರುವ ಕಾರಣ ತೂಕವಾಗಿರುತ್ತದೆ. ಕಲ್ಲಂಗಡಿ ಗಾತ್ರದಲ್ಲಿ ಚಿಕ್ಕದಾಗಿದ್ರೂ ತೂಕವನ್ನು ಹೊಂದಿದ್ರೆ ಅದು ಫ್ರೆಶ್ ಆಗಿದೆ ಎಂದು ತಿಳಿದುಕೊಳ್ಳಬೇಕು. ಖರೀದಿ ವೇಳೆ ಹಣ್ಣನ್ನು ಕೈಯಲ್ಲಿ ಹಿಡಿದುಕೊಂಡು ಅಂದಾಜು ತೂಕ ಲೆಕ್ಕ ಹಾಕಬಹುದು. ಹಣ್ಣಾದ ಕಲ್ಲಂಗಡಿ ಗಟ್ಟಿಯಾಗಿರುತ್ತದೆ.
ಕಲ್ಲಂಗಡಿ ಟ್ಯಾಪ್ ಮಾಡಿ
ಕಲ್ಲಂಗಡಿಯ ಪಕ್ವತೆಯನ್ನು ಪರೀಕ್ಷಿಸಲು ಅತ್ಯಂತ ಹಳೆಯ ತಂತ್ರವೆಂದರೆ ಅದನ್ನು ನಿಧಾನವಾಗಿ ಟ್ಯಾಪ್ ಮಾಡುವುದು. ಮಾಗಿದ ಕಲ್ಲಂಗಡಿಯಿಂದ ಟೊಳ್ಳಾದ ಶಬ್ದ ಕೇಳುತ್ತದೆ. ಪರಿಪೂರ್ಣವಾಗಿ ಹಣ್ಣಾಗದ ಕಲ್ಲಂಗಡಿ ಮೇಲೆ ಟ್ಯಾಪ್ ಮಾಡಿದಾಗ ಹೆಚ್ಚು ಶಬ್ದ ಕೇಳಿಸಲ್ಲ. ಟೊಳ್ಳಾದ ಶಬ್ದವು ಕಲ್ಲಂಗಡಿ ನೀರಿನಿಂದ ತುಂಬಿದೆ ಮತ್ತು ಪಕ್ವವಾಗಿದ ಎಂಬದನ್ನು ಸೂಚಿಸುತ್ತದೆ.
ಹಳದಿ ಬಣ್ಣ
ಬಳ್ಳಿಯಲ್ಲಿಯೇ ಕಲ್ಲಂಗಡಿ ಹಣ್ಣು ಆಗಿದ್ರೆ, ತುಂಬಾ ಸಮಯದವರೆಗೆ ನೆಲದ ಮೇಲೆಯೇ ಇರುತ್ತದೆ. ಹಾಗಾಗಿ ಕಲ್ಲಂಗಡಿ ಒಂದು ಭಾಗ ತಿಳಿ ಹಳದಿ ಬಣ್ಣಕ್ಕೆ ಬದಲಾಗುತ್ತಿರುತ್ತದೆ. ಇದು ಸಹ ಕಲ್ಲಂಗಡಿಯ ಪಕ್ವತೆಯನ್ನು ತೋರಿಸುತ್ತದೆ. ಬಿಳಿ ಅಥವಾ ಸಂಪೂರ್ಣವಾಗಿ ಹಸಿರು ಬಣ್ಣದ್ದಾಗಿದ್ದರೆ ಅದು ಹಣ್ಣಾಗಿರಲ್ಲ ಎಂದರ್ಥ.
ನಯವಾದ, ಕಲೆಯಿಲ್ಲದ ಸಿಪ್ಪೆಯನ್ನು ಹುಡುಕಿ
ನಯವಾದ ಸಿಪ್ಪೆ ಮತ್ತು ಗೀರುಗಳಿಲ್ಲದ ಕಲ್ಲಂಗಡಿ ಹಣ್ಣಾಗುವ ಸಾಧ್ಯತೆ ಹೆಚ್ಚು. ಸಣ್ಣಪುಟ್ಟ ಕಲೆಗಳು ಪರವಾಗಿಲ್ಲ, ಆದರೆ ದೊಡ್ಡ ಮಾರ್ಕ್ ಅಥವಾ ಮೃದುವಾದ ಕಲೆಗಳು ಇದ್ರೆ ಅದನ್ನು ಬಳ್ಳಿಯಿಂದ ಬೇರ್ಪಡಿಸಿ ತುಂಬಾ ಸಮಯವಾಗಿದೆ ಎಂದರ್ಥ