ರಾಮನಗರ: ರಾಜ್ಯ ಮಹಿಳೆಯರಿಗೆ ಉಚಿತ ಬಸ್ ಸಾರಿಗೆ ಸೌಲಭ್ಯ ಒದಗಿಸಲಾಗಿರುವ ಶಕ್ತಿ ಯೋಜನೆಯನ್ನು ಸ್ಥಗಿತ, ಇಲ್ಲವೇ ಮರು ಪರಿಶೀಲನೆ ಮಾಡುವ ಹೇಳಿಕೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ಗುರುವಾರ ಪ್ರಚಾರ ನಡೆಸಿದ ಸಂದರ್ಭದಲ್ಲಿ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ರಾತ್ರಿ ಪದೇ ಪದೇ ಮೂತ್ರ ವಿಸರ್ಜನೆ ಮಾಡ್ತೀರಾ? ಹಾಗಾದ್ರೆ ಈ ಕಾಯಿಲೆಗಳು ಬರುವ ಸಾಧ್ಯತೆ
ಡಿಕೆಶಿ ಅವರಿಗೆ ಮಹಿಳೆಯರು ಕನಸಿನಲ್ಲಿ ಬಂದು ಶಕ್ತಿ ಯೋಜನೆಯನ್ನು ನಿಲ್ಲಿಸಿ ಎಂದು ಕೇಳಿದ್ದಾರೆಯೇ? ಅಥವಾ ದೇವರು ಬಂದು ಹೇಳಿದ್ದಾರೆಯೇ? ಒಂದೊಂದಾಗಿ 5 ಗ್ಯಾರಂಟಿಗಳನ್ನು ನಿಲ್ಲಿಸಲು ಇದೊಂದು ಮೊದಲ ಹೆಜ್ಜೆ ಅಷ್ಟೇ. ಇನ್ನು ಕೆಲವೇ ದಿನಗಳಲ್ಲಿ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವ ನಿಧಿ ಕಾರ್ಯಕ್ರಮಗಳನ್ನು ನಿಲ್ಲಿಸಲಿದ್ದಾರೆ. ಅದಕ್ಕೆ ಇವರು ಮರು ಪರಿಶೀಲನೆ ಎಂಬ ಪೀಠಿಕೆ ಹಾಕಿಕೊಂಡಿದ್ದಾರೆ ಎಂದು ಕೇಂದ್ರ ಸಚಿವರು ಕಿಡಿಕಾರಿದರು.
ಒಂದೂವರೆ ವರ್ಷದಲ್ಲಿ ಮಹಿಳೆಯರು ಆರ್ಥಿಕವಾಗಿ ಬಲಾಢ್ಯರಾಗಿದ್ದಾರೆಯೇ?
ಟ್ವೀಟ್ ಮೂಲಕ ಮಹಿಳೆಯರು ಶಕ್ತಿ ಯೋಜನೆಯನ್ನು ನಿಲ್ಲಿಸಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಯಾರು ಟ್ವೀಟ್ ಮಾಡಿದ್ದಾರೆ? ಅಥವಾ ಮಹಿಳೆಯರು ಆರ್ಥಿಕವಾಗಿ ಬಲಾಢ್ಯರಾಗಿದ್ದಾರೆ ಎಂದು ಇವರಿಗೆ ಹೊಸ ಜ್ಞಾನೋದಯ ಆಗಿದೆಯಾ? ಕೇವಲ ಒಂದೂವರೆ ವರ್ಷದಲ್ಲಿ ಇವರು ಆರ್ಥಿಕವಾಗಿ ಬಲಾಢ್ಯರಾಗಿದ್ದಾರೆಯೇ? ಎಂದು ಪ್ರಶ್ನಿಸಿದರು ಕೇಂದ್ರ ಸಚಿವರು.
ಗ್ಯಾರಂಟೀಗಳ ಹೆಸರಿನಲ್ಲಿ ಜನರ ಬ್ರೈನ್ ವಾಷ್
ಶಕ್ತಿ ಯೋಜನೆಯ ಮರು ಪರಿಶೀಲನೆಯ ನಾಟಕ ಗ್ಯಾರಂಟಿಗಳನ್ನು ಒಂದೊಂದಾಗಿಯೇ ತೆಗೆಯಲು ಮೊದಲ ಹಂತಂದ ಪ್ರಕ್ರಿಯೆ ಎಂದೇ ಭಾವಿಸಬೇಕಾಗುತ್ತದೆ. ಇದು ಗ್ಯಾರಂಟಿ ನಿಲ್ಲಿಸಲು ಒಂದು ಪೀಠಿಕೆ ಮಾತ್ರ. ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಗ್ಯಾರಂಟಿಗಳನ್ನೇ ಪ್ರಮುಖವಾಗಿ ಇವರು ಹೇಳುತ್ತಿದ್ದರು. ನುಡಿದಂತೆ ನಡೆದಿದ್ದೇವೆ ಎಂದು ಜನರ ಬ್ರೈನ್ ವಾಷ್ ಮಾಡುತ್ತಿದ್ದರು. ಇದರಿಂದ ಅಭಿವೃದ್ಧಿ ಕೆಲಸಗಳನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು. ತೆರಿಗೆ ಅಧಿಕಾರಿಗಳ ಸಭೆ ಮಾಡಿ ಇನ್ನೂ ಹೆಚ್ಚುವರಿಯಾಗಿ ₹10,000 ಕೋಟಿ ವಸೂಲಿ ಮಾಡುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಅಂದರೆ, ಇನ್ನಷ್ಟು ಸುಲಿಗೆ ಮಾಡಿ ಅಂತ ಅರ್ಥ ಅಲ್ಲವೇ? ಇದು ಯಾವ ಪುರುಷಾರ್ಥಕ್ಕೆ? ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿ ಹೆಸರು ಹೇಳಿ ಜನರಿಗೆ ಹೊರೆ ಹೊರೆಸಿ, ಅವರ ಹಣವನ್ನೇ ಕಿತ್ತು ಅವರಿಗೆ ಚೂರುಪಾರು ಹಂಚುವ ಗ್ಯಾರಂಟಿಗಳಿಗೆ ಅರ್ಥ ಇದೆಯಾ? ಚುನಾವಣೆ ಗೆಲ್ಲುವ ದುರಾಸೆಯಿಂದ ಇಂಥ ಅವಾಸ್ತವಿಕ ಭರವಸೆಗಳನ್ನು ಕೊಟ್ಟು ರಾಜ್ಯವನ್ನು ಹಾಳು ಮಾಡಿದ್ದಾರೆ. ಜರನ್ನು ರಣಹದ್ದುಗಳ ರೀತಿಯಲ್ಲಿ ಸರಕಾರ ಕಿತ್ತು ತಿನ್ನುತ್ತಿದೆ ಎಂದು ಅವರು ದೂರಿದರು. ಗ್ಯಾರಂಟಿಗಳಿಂದ ಕ್ಯಾಪಿಟಲ್ ಅಸೆಟ್ ಆಗುತ್ತಿಲ್ಲ, ಬರೀ ಖರ್ಚಾಗುತ್ತಿದೆ.
ನಾನು ಗ್ಯಾರಂಟಿ ಕೊಡುವುದನ್ನು ವಿರೋಧಿಸುತ್ತಿಲ್ಲ. ಗ್ಯಾರಂಟಿ ಕೊಡಿ, ಗ್ಯಾರಂಟಿ ಹೆಸರಲ್ಲಿ ಆರ್ಥಿಕ ಪರಿಸ್ಥಿತಿ ಹಾಳು ಮಾಡಬೇಡಿ. ಮುಂದಿನ ಅಧಿಕಾರ ನಡೆಸುವ ಪೀಳಿಗೆಯ ಭವಿಷ್ಯ ಹಾಳು ಮಾಡಬೇಡಿ. ಅನ್ನಭಾಗ್ಯಕ್ಕೂ ಷರತ್ತುಗಳನ್ನು ವಿಧಿಸಿದ್ದಾರೆ. ಗೃಹಲಕ್ಷ್ಮಿಗೂ ಷರತ್ತುಗಳನ್ನು ಹಾಕಿದ್ದಾರೆ. ಅಕ್ಕಿ ಕೊಡುವುದನ್ನು ಕಡಿತಗೊಳಿಸಿದ್ದಾರೆ. ಇದು ಮುಂದೆ ಯಾವ ಹಂತಕ್ಕೆ ಹೋಗುತ್ತದೆ ಈಜುವುದನ್ನು ಕಾದು ನೋಡಬೇಕು ಎಂದು ಕೇಂದ್ರ ಸಚಿವರು ಕಳವಳ ವ್ಯಕ್ತಪಡಿಸಿದರು.
ಗ್ಯಾರಂಟಿ ಬಗ್ಗೆ ನಮಗೆ ಹೊಟ್ಟೆ ಉರಿ ಇಲ್ಲ
ನಮಗೆ ಗ್ಯಾರಂಟಿ ಬಗ್ಗೆ ಯಾವುದೇ ಹೊಟ್ಟೆ ಉರಿ ಇಲ್ಲ. ಗ್ಯಾರಂಟಿ ಬೇಕಾದರೆ ಡಬಲ್ ಮಾಡಿಕೊಳ್ಳಿ. ಆದರೆ ರಾಜ್ಯವನ್ನು ದೀವಾಳಿ ಮಾಡಬೇಡಿ. ಸರ್ಕಾರದ ಅಭಿವೃದ್ಧಿ ಶೂನ್ಯ ಆಗಿದೆ. ಬೇರೆ ದೇಶಗಳಲ್ಲಿ ಉಂಟಾಗಿರುವ ಆರ್ಥಿಕ ಅರಾಜಕತೆ ನಮ್ಮ ರಾಜ್ಯಕ್ಕೆ ಬರಬಾರದು ನನ್ನ ನಮ್ಮ ಕಳಕಳಿ ಎಂದು ಕುಮಾರಸ್ವಾಮಿ ಅವರು ಹೇಳಿದರು. ಮಾಜಿ ಸಚಿವ ಬಿ.ಸಿ.ಪಾಟೀಲ್ ಸೇರಿದಂತೆ ಜೆಡಿಎಸ್ ಬಿಜೆಪಿ ಪಕ್ಷಗಳ ಹಲವಾರು ನಾಯಕರು ಕೇಂದ್ರ ಸಚಿವರ ಜತೆಯಲ್ಲಿ.ಇದ್ದರು.