ನವದೆಹಲಿ: ಜಾರ್ಜಿಯಾದ ಮೌಂಟೇನ್ ರೆಸಾರ್ಟ್ನಲ್ಲಿ ಭಾರತದ 11 ಮಂದಿ ಸೇರಿದಂತೆ ಒಟ್ಟು 12 ಮಂದಿಯ ಶವಗಳು ಪತ್ತೆಯಾಗಿವೆ. ಗುಡೌರಿಯ ರೆಸ್ಟೋರೆಂಟ್ನ ಎರಡನೇ ಮಹಡಿಯ ಮಲಗುವ ಕೋಣೆಗಳಲ್ಲಿ 12 ಶವಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಮೃತಪಟ್ಟವರೆಲ್ಲರೂ ಅದೇ ಭಾರತೀಯ ರೆಸ್ಟೋರೆಂಟ್ನ ಉದ್ಯೋಗಿಗಳಾಗಿದ್ದು ಕಾರ್ಬನ್ ಮಾನಾಕ್ಸೈಡ್ ವಿಷದಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಮಲಗುವ ಕೋಣೆಗಳ ಬಳಿ ಮುಚ್ಚಿದ ಜಾಗದಲ್ಲಿ ವಿದ್ಯುತ್ ಜನರೇಟರ್ ಇದ್ದ ಕಾರಣ ೀ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ವಿದ್ಯುತ್ ಸಂಪರ್ಕ ಸ್ಥಗಿತಗೊಂಡ ನಂತರ ಅಲ್ಲಿದ್ದ ಜನರೇಟರ್ ಆನ್ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಗಳು ಹೇಳಿವೆ.
ಗುಡೌರಿಯ ಮೌಂಟೇನ್ ರೆಸಾರ್ಟ್ನಲ್ಲಿರುವ ರೆಸ್ಟಾರೆಂಟ್ನಲ್ಲಿ ಶವವಾಗಿ ಪತ್ತೆಯಾದ 12 ಜನರಲ್ಲಿ 11 ಭಾರತೀಯ ಪ್ರಜೆಗಳು ಸೇರಿದ್ದಾರೆ ಎಂದು ಜಾರ್ಜಿಯಾದಲ್ಲಿನ ಭಾರತೀಯ ಮಿಷನ್ ದೃಢಪಡಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಕಾರ್ಬನ್ ಮಾನಾಕ್ಸೈಡ್ ವಿಷದಿಂದ ಸಾವು ಸಂಭವಿಸಿರಬಹುದು ಎನ್ನಲಾಗಿದೆ. ಆರಂಭಿಕ ತಪಾಸಣೆಯಲ್ಲಿ ಯಾವುದೇ ಗಾಯಗಳು ಅಥವಾ ಹಿಂಸಾಚಾರದ ಚಿಹ್ನೆಗಳು ಪತ್ತೆಯಾಗಿಲ್ಲ ಎಂದು ಜಾರ್ಜಿಯಾದ ಆಂತರಿಕ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಪೊಲೀಸರು ಜಾರ್ಜಿಯಾದ ಕ್ರಿಮಿನಲ್ ಕೋಡ್ನ ಆರ್ಟಿಕಲ್ 116ರ ಅಡಿಯಲ್ಲಿ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಇದು ನಿರ್ಲಕ್ಷ್ಯದ ನರಹತ್ಯೆಯನ್ನು ಒಳಗೊಂಡಿದೆ. ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಫೋರೆನ್ಸಿಕ್ ವೈದ್ಯಕೀಯ ಪರೀಕ್ಷೆಗೆ ಆದೇಶಿಸಲಾಗಿದೆ
ಗುಡೌರಿಯಲ್ಲಿ 11 ಭಾರತೀಯ ಪ್ರಜೆಗಳು ದುರದೃಷ್ಟಕರವಾಗಿ ನಿಧನರಾದ ಬಗ್ಗೆ ತಿಳಿದು ದುಃಖವಾಯಿತು. ಅವರ ಕುಟುಂಬಗಳಿಗೆ ತನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದೆ ಎಂದು ಟಿಬಿಲಿಸಿಯಲ್ಲಿರುವ ಭಾರತೀಯ ಮಿಷನ್ ಸಂತಾಪ ಸೂಚಿಸಿದೆ.