ಬಾಗಲಕೋಟೆ: ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ತಾಯಿ ವಿಧಿವಶರಾಗಿದ್ದಾರೆ. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಸುಶಿಲಾಬಾಯಿ (78)ಯವರು (Sushila Bai) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಸುಶಿಲಾಬಾಯಿ ಅವರು ಕಳೆದ 10 ದಿನಗಳಿಂದ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಇವರು ಪತಿ ರುದ್ರಪ್ಪ ನಿರಾಣಿ, ಐವರು ಗಂಡುಮಕ್ಕಳು, ಇಬ್ಬರು ಹೆಣ್ಣುಮಕ್ಕಳು, ಐವರು ಸೊಸೆಯಂದಿರು ಹಾಗೂ 14 ಮಂದಿ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಸುಶಿಲಾಬಾಯಿಯವರು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಸವಹಂಚಿನಾಳ ಗ್ರಾಮದಲ್ಲಿ ನೆಲೆಸಿದ್ದರು. ಮಂಗಳವಾರ ಮದ್ಯಾಹ್ನ 1 ಗಂಟೆಗೆ ಸ್ವಗ್ರಾಮ ಬಸವಹಂಚಿನಾಳದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಕೃಷಿಪ್ರಧಾನ ಕುಟುಂಬದ ನಿರಾಣಿ ಪರಿವಾರದ ಮನೆಯೊಡತಿಯಾಗಿದ್ದ ಸುಶಿಲಾಬಾಯಿ ಅವರ ಅಗಲಿಕೆಯಿಂದ ನಿರಾಣಿ ಅವರ ಅಪಾರ ಬಂಧು ಬಳಗ ದುಃಖದಲ್ಲಿ ಮುಳುಗಿದೆ.