ಶ್ರೀಲಂಕಾ ಪ್ರವಾಸದ ನಂತರ ಭಾರತ ತಂಡಕ್ಕೆ ಸುದೀರ್ಘ ಬ್ರೇಕ್ ಸಿಕ್ಕಿದೆ. 42 ದಿನಗಳ ಬಳಿಕ ಭಾರತ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಲಿದೆ. ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ಗಳ ಸರಣಿಯೊಂದಿಗೆ ಟೀಮ್ ಇಂಡಿಯಾದ ಕ್ರಿಕೆಟ್ ವೇಳಾಪಟ್ಟಿ ಪುನರಾರಂಭವಾಗಲಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಭಾರತ ತಂಡ 10 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದರೊಂದಿಗೆ ಭಾರತ ತಂಡದ ಟೀಮ್ ಮ್ಯಾನೇಜ್ಮೆಂಟ್ ಮತ್ತು ಆಯ್ಕೆಗಾರರು ಅತ್ಯುತ್ತಮ ಟೆಸ್ಟ್ ತಂಡವನ್ನು ಆಯ್ಕೆ ಮಾಡಲು ಮಾಸ್ಟರ್ ಪ್ಲಾನ್ ಹಾಕಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರು ಪ್ರತಿಷ್ಠಿತ ದೇಶಿ ಕ್ರಿಕೆಟ್ ಟೂರ್ನಿಯಾದ 2024ರ ದುಲೀಪ್ ಟ್ರೋಫಿಯನ್ನು ಬಳಸಿಕೊಳ್ಳಲು ಬಯಸುತ್ತಿದ್ದಾರೆ. ಟೀಮ್ ಇಂಡಿಯಾದ ಎಲ್ಲಾ ಸ್ಟಾರ್ ಆಟಗಾರರಿಗೆ ದುಲೀಪ್ ಟ್ರೋಫಿ ಆಡಲು ಈಗಾಗಲೇ ಆದೇಶ ನೀಡಲಾಗಿದೆ. ನಾಯಕ ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ, ರಿಷಬ್ ಪಂತ್, ಕೆಎಲ್ ರಾಹುಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಮತ್ತು ಇತರ ಆಟಗಾರರು ದೇಶಿ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಲಿದ್ದಾರೆ.
ಪೂರ್ವ, ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ, ಮಧ್ಯ ಮತ್ತು ಈಶಾನ್ಯ ವಲಯಗಳ ತಂಡಗಳ ಮೂಲಕ ದುಲೀಪ್ ಟ್ರೋಫಿಯನ್ನು ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಆಯ್ಕೆದಾರರು ಕೇವಲ ನಾಲ್ಕು ತಂಡಗಳೊಂದಿಗೆ ಈ ಟೂರ್ನಿಯನ್ನು ಆಡಲು ಬಯಸುತ್ತಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಎ, ಬಿ, ಸಿ ಮತ್ತು ಡಿ ತಂಡಗಳೊಂದಿಗೆ ಭಾರತದ ಹಿರಿಯ ಮತ್ತು ಭಾರತ-ಎ ಆಟಗಾರರು ಹಾಗೂ ರಣಜಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರಿದ ದೇಶಿ ಕ್ರಿಕೆಟಿಗರೊಂದಿಗೆ ಈ ಟೂರ್ನಿಯನ್ನು ಆಯೋಜಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.