ಇಂದು ಕುಸ್ತಿಪಟು ವಿನೇಶ್ ಫೋಗಟ್ ಬೆಳ್ಳಿ ಪದಕದ ತೀರ್ಪು ಪ್ರಕಟವಾಗಲಿದೆ.
ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿ ಫೈನಲ್ ಪಂದ್ಯಕ್ಕೂ ಮುನ್ನ ದೇಹತೂಕ ಪರೀಕ್ಷೆಯಲ್ಲಿ 100 ಗ್ರಾಂ ಹೆಚ್ಚು ಕಂಡು ಬಂದ ಕಾರಣ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿತ್ತು. ಇದರಿಂದ ಭಾರತಕ್ಕೆ ಚಿನ್ನ ಅಥವಾ ಬೆಳ್ಳಿ ಪದಕ ಲಭಿಸುವ ಅವಕಾಶ ಕೈಜಾರಿತ್ತು.
ಅನರ್ಹ ಮಾಡಿದ್ದ ಬಗ್ಗೆ ಪ್ರಶ್ನಿಸಿ ವಿನೇಶ್ ಅವರು ತಮಗೆ ಜಂಟಿ ಬೆಳ್ಳಿ ಪದಕವನ್ನು ನೀಡಬೇಕು ಎಂದು ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಒಲಿಂಪಿಕ್ಸ್ನಲ್ಲಿರುವ ಕ್ರೀಡಾ ನ್ಯಾಯಮಂಡಳಿಯ ಹಂಗಾಮಿ ಪೀಠವು ವಿಚಾರಣೆ ನಡೆಸಿ ಒಲಿಂಪಿಕ್ಸ್ ಮುಕ್ತಾಯಕ್ಕೂ ಮುನ್ನ ತೀರ್ಪು ಪ್ರಕಟಿಸುವುದಾಗಿ ತಿಳಿಸಿತ್ತು. ಆದರೆ 2 ಬಾರಿ ಈ ತೀರ್ಪು ಪ್ರಕಟ ಮುಂದೂಡಿಕೆಯಾಗಿತ್ತು. ಇದೀಗ ಇಂದು ಅಧಿಕೃತವಾಗಿ ತೀರ್ಪು ಪ್ರಕಟಿಸುವುದಾಗಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ತಿಳಿಸಿದೆ. ರಾತ್ರಿ 9:30ಕ್ಕೆ ಈ ತೀರ್ಪು ಪ್ರಕಟಗೊಳ್ಳಲಿದೆ. ಒಂದೊಮ್ಮೆ ವಿನೇಶ್ಗೆ ಬೆಳ್ಳಿ ಪದಕ ನೀಡುವಂತೆ ತೀರ್ಪು ಪ್ರಕಟಗೊಂಡರೆ ಭಾರತದ ಪದಕ ಸಂಖ್ಯೆ 7ಕ್ಕೆ ಏರಲಿದೆ. ಜತೆಗೆ ವಿನೇಶ್ ಐತಿಹಾಸಿಕ ಪದಕ ಗೆದ್ದ ಭಾರತೀಯ ಮಹಿಳಾ ಕುಸ್ತಿಪಟು ಎನ್ನುವ ಹಿರಿಮೆಗೂ ಪಾತ್ರರಾಗಲಿದ್ದಾರೆ.
ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ವಿದುಶ್ಪತ್ ಸಿಂಘಾನಿಯಾ ಸೇರಿದಂತೆ ವಿನೇಶ್ ಅವರ ವಕೀಲರು ವಿನೇಶ್ ಪರ ವಾದ ಮಾಡಿದ್ದಾರೆ. ತೂಕ ಹೆಚ್ಚಳವು ದೇಹದ ನೈಸರ್ಗಿಕ ಚೇತರಿಕೆ ಪ್ರಕ್ರಿಯೆಯಿಂದಾಗಿ ಮತ್ತು ದೇಹ ನೋಡಿಕೊಳ್ಳುವುದು ಕ್ರೀಡಾಪಟುವಿನ ಮೂಲಭೂತ ಹಕ್ಕು ಎಂದು ವಾದಿಸಿದ್ದಾರೆ. ಸ್ಪರ್ಧೆಯ 1ನೇ ದಿನದಂದು ಆಕೆಯ ದೇಹದ ತೂಕವು ನಿಗದಿತ ಮಿತಿಗಿಂತ ಕಡಿಮೆಯಾಗಿತ್ತು. ಬಳಿಕ ಏಕಾಏಕಿ ಏರಿಕೆಯಾಗಿದೆ. ಅದು ವಂಚನೆಯಲ್ಲ ಎಂದು ಅವರು ವಾದಿಸಿದ್ದಾರೆ.
ಸೆಮಿಫೈನಲ್ ವೇಳೆ ವಿನೇಶ್ 49.9 ಕೆಜಿ ತೂಕವಿದ್ದರು. 3 ಬೌಟ್ಗಳು ಮುಗಿಯುವ ವೇಳೆಗೆ ಶಕ್ತಿ ಕಾಪಾಡಿಕೊಳ್ಳಲು ಹೈ ಎನರ್ಜಿ ಆಹಾರ ಸೇವಿಸಿದ ಕಾರಣ ಅವರ ತೂಕ 2.8 ಕೆಜಿ ಹೆಚ್ಚಳವಾಗಿತ್ತು. ಈ 2.8 ಕೆಜಿಯನ್ನು ಕಡಿಮೆ ಮಾಡಲು ವಿನೇಶ್ ರಾತ್ರಿಯಿಡೀ ಯಾವುದೇ ಆಹಾರ ಸೇವಿಸದೇ, ಸೈಕ್ಲಿಂಗ್ ನಡೆಸಿ, ಸ್ಕಿಪ್ಪಿಂಗ್ ಮಾಡಿದ್ದರು. ತೂಕ ಇಳಿಸಲು ಬೇಕಾಗುವ ಎಲ್ಲ ಕಸರತ್ತುಗಳನ್ನು ಕೈಗೊಂಡಿದ್ದರು. ಈ ಮೂಲಕ ಅವರು ಸಾಕಷ್ಟು ತೂಕ ಇಳಿಸಿದ್ದರು. ಕೊನೆ ಕ್ಷಣದಲ್ಲಿ ಅವರ ಕೂದಲು ಕತ್ತರಿಸಿ, ಬಟ್ಟೆಗಳ ಗಾತ್ರವನ್ನು ಕುಗ್ಗಿಸಿ ಪರೀಕ್ಷೆಗೆ ಕಳುಹಿಸಲಾಯಿತು. ಆದರೂ 100 ಗ್ರಾಂ ಹೆಚ್ಚಿದ್ದ ಕಾರಣ ಅನರ್ಹಗೊಂಡರು.