ನವದೆಹಲಿ: ಸಂಸತ್’ನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ನ (TMC) ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸದನದಿಂದ ಉಚ್ಚಾಟಿಸಲಾಗಿದೆ. ನೀತಿ ಸಮಿತಿಯ ವರದಿಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಾಯಿತು. ವರದಿಯನ್ನು ಆಧರಿಸಿ ಲೋಕಸಭೆಯಿಂದ ಮಹುವಾ ಮೊಯಿತ್ರಾ (Mahua Moitra) ಅವರು ಉಚ್ಚಾಟನೆಗೊಂಡಿದ್ದಾರೆ.
ಮೊಯಿತ್ರಾ ಅವರು ಸಂಸತ್ತಿನಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನು ಕೇಳುವ ಸಲುವಾಗಿ ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ 2 ಕೋಟಿ ರೂ. ನಗದು ಮತ್ತು ಐಷಾರಾಮಿ ಉಡುಗೊರೆ ವಸ್ತುಗಳು ಸೇರಿದಂತೆ ಲಂಚ ಪಡೆದ ಆರೋಪ ಹೊತ್ತಿದ್ದರು.
ಮಹುವಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸುವಂತೆ ಶಿಫಾರಸು ಮಾಡಿರುವ ವರದಿಯನ್ನು ಬಿಜೆಪಿ ಸಂಸದ ವಿನೋದ್ ಕುಮಾರ್ ಸೋನಕರ್ ನೇತೃತ್ವದ ನೀತಿ ಸಮಿತಿಯು ನ.9 ರಂದು ಅಂಗೀಕರಿಸಿತ್ತು. ಮಹುವಾ ಅವರನ್ನು ಉಚ್ಚಾಟನೆ ಮಾಡಬೇಕಾದರೆ ಈ ಬಗ್ಗೆ ಸರ್ಕಾರ ನಿಲುವಳಿ ಮಂಡಿಸಿ, ಸದನದ ಅಂಗೀಕಾರ ಪಡೆಯಬೇಕಿತ್ತು.
ಪ್ರಕರಣ ಸಂಬಂಧ ಶುಕ್ರವಾರ ಬಿರುಸಿನ ಚರ್ಚೆ ಮತ್ತು ಧ್ವನಿ ಮತದ ನಂತರ ಸ್ಪೀಕರ್ ಓಂ ಬಿರ್ಲಾ ಅವರು, ಈ ಸದನವು ಸಮಿತಿಯ ತೀರ್ಮಾನಗಳನ್ನು ಸ್ವೀಕರಿಸುತ್ತದೆ. ಮಹುವಾ ಮೊಯಿತ್ರಾ ಅವರು ಸಂಸದರಾಗಿ ಮುಂದುವರಿಯುವುದು ಸೂಕ್ತವಲ್ಲ ಎಂದು ತಿಳಿಸಿದರು.