ಕನ್ನಡ ಸಿನಿಮಾ ರಂಗದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದ ಲೀಲಾವತಿ (Leelavati) ಅವರು, ಆನಂತರ ದಕ್ಷಿಣದ ಅಷ್ಟೂ ಭಾಷೆಗಳಲ್ಲೂ ನಟಿಸಿದವರು. ತಮಿಳು, ತೆಲುಗು, ಕನ್ನಡ, ಮಲೆಯಾಳಂ ಸೇರಿದಂತೆ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. 1949ರಲ್ಲಿ ತೆರೆ ಕಂಡ ಶಂಕರ್ ಸಿಂಗ್ ಅವರ ನಾಗಕನ್ನಿಕ ಇವರ ಮೊದಲ ಚಿತ್ರ. ಇದಕ್ಕೂ ಮೊದಲು ಲೀಲಾವತಿ ಅವರು ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.
ಕಯಾದುವಿನ ಸಖಿ, ಭಕ್ತ ಪ್ರಹ್ಲಾದ ಸೇರಿದಂತೆ ಸಾಕಷ್ಟು ನಾಟಕಗಳಲ್ಲಿ ಇವರು ಅಭಿನಯಿಸಿದ್ದಾರೆ. ಸಿನಿಮಾ ರಂಗಕ್ಕೆ ಬಂದ ನಂತರ, ಭಕ್ತ ಕುಂಬಾರ ಮನೆ ಮೆಚ್ಚಿದ ಸೊಸೆ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿಕ್ಕಚಿಕ್ಕ ಪಾತ್ರಗಳನ್ನೇ ಮಾಡುತ್ತಾ ಬಂದಿದ್ದ ಲೀಲಾವತಿ ಅವರು, ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ ಮಾಂಗಲ್ಯ ಯೋಗ. ನಂತರ ಡಾ.ರಾಜ್ ಕುಮಾರ್ ಅವರೊಂದಿಗೆ ಮೊದಲ ಬಾರಿಗೆ ರಣಧೀರ ಕಂಠೀರವ ಸಿನಿಮಾದಲ್ಲಿ ನಟಿಸಿದರು.
ಡಾ.ರಾಜ್ ಕುಮಾರ್ ಮತ್ತು ಲೀಲಾವತಿ ಅವರ ಜೋಡಿ ಆ ಕಾಲದಲ್ಲಿ ಫೇಮಸ್. ಡಾ.ರಾಜ್ ಕುಮಾರ್ ಅವರ ಸಾಕಷ್ಟು ಸಿನಿಮಾಗಳಿಗೆ ನಾಯಕಿಯಾಗಿ, ತಾಯಿಯಾಗಿ, ಅತ್ತೆಯಾಗಿ ಹಲವಾರು ರೀತಿಯ ಪಾತ್ರಗಳನ್ನು ಇವರು ಮಾಡಿದ್ದಾರೆ. ಜೊತೆಗೆ ಸಾಕಷ್ಟು ತಾರೆಯರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಅಂದಹಾಗೆ ಲೀಲಾವತಿ ಅವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಅವರು. ನಟನೆಯ ಮೇಲಿನ ಆಸಕ್ತಿಯಿಂದಾಗಿ ಚಿಕ್ಕವಯಸ್ಸಿನಲ್ಲೇ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು.
ಮೈಸೂರಿನಿಂದ ವೃತ್ತಿ ಆರಂಭಿಸಿ, ಮದ್ರಾಸ್, ಬೆಂಗಳೂರು ಹೀಗೆ ಹಲವು ಕಡೆ ಪ್ರಯಾಣ ಮಾಡಿದ್ದಾರೆ. ಯಶಸ್ವಿ ನಟಿಯಾಗಿ ಬೆಳೆದಿದ್ದಾರೆ. ಲೀಲಾವತಿ ಅವರು ಸಾಧನೆಗೆ ಹತ್ತು ಹಲವಾರು ಪುರಸ್ಕಾರಗಳೂ ಸಂದಿವೆ. ಕರ್ನಾಟಕ ಸರಕಾರ ಕೊಡಮಾಡುವ ಜೀವಮಾನ ಸಾಧನೆಗಾಗಿ ಡಾ. ರಾಜ್ ಕುಮಾರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ತುಮಕೂರ ವಿಶ್ವವಿದ್ಯಾಲಯ ಇವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.