ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇದರೊಂದಿಗೆ ಭಾರತದ ಇಬ್ಬರು ದಿಗ್ಗಜರ ಟಿ20ಐ ಕೆರಿಯರ್ ಅಂತ್ಯವಾದಂತಾಗಿದೆ.
ಇದೀಗ ಮತ್ತೋರ್ವ ಸ್ಟಾರ್ ಆಟಗಾರ ಕೂಡ ನಿವೃತ್ತಿ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದಾರೆ.
ಭಾರತ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದಿದೆ. ಇದರ ಸಂಭ್ರಚಾರಣೆಯಲ್ಲಿದ್ದ ಫ್ಯಾನ್ಸ್ಗೆ ಈಗಾಗಲೇ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತಿ ಘೋಷಿಸುವ ಮೂಲಕ ಶಾಕ್ ನೀಡಿದ್ದರು. ಇದೀಗ ಟೀಂ ಇಂಡಿಯಾದ ಆಲ್ರೌಂಡರ್ ಪ್ಲೇಯರ್ ಆಗಿದ್ದ ರವೀಂದ್ರ ಜಡೇಜಾ ಕೂಡ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಈ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಕಿಂಗ್ ಕೊಹ್ಲಿ ಇದುವೇ ನನ್ನ ಕೊನೆಯ ಟಿ20 ವಿಶ್ವಕಪ್ ಟೂರ್ನಿ. ಈ ಗೆಲುವಿನೊಂದಿಗೆ ಟಿ20 ಅಂತಾರಾಷ್ಟ್ರೀಯ ಕೆರಿಯರ್ ಅಂತ್ಯಗೊಳಿಸಲು ಬಯಸಿದ್ದೇನೆ ಎಂದು ತಿಳಿಸಿದರು.
ವಿಶ್ವಕಪ್ ಗೆದ್ದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ, ನಾನು ಟಿ20 ಪಂದ್ಯದೊಂದಿಗೆ ಭಾರತದ ಪರ ವೃತ್ತಿಜೀವನ ಆರಂಭಿಸಿದ್ದೆ. ಇದೀಗ ಟಿ20 ಅಂತಾರಾಷ್ಟ್ರೀಯ ಕೆರಿಯರ್ಗೆ ವಿದಾಯ ಹೇಳಲು ಇದಕ್ಕಿಂತ ಉತ್ತಮ ಸಮಯವಿಲ್ಲ. ಹೀಗಾಗಿ ಈ ಸ್ವರೂಪದ ಕ್ರಿಕೆಟ್ಗೆ ವಿದಾಯ ಹೇಳುತ್ತಿರುವುದಾಗಿ ರೋಹಿತ್ ಶರ್ಮಾ ತಿಳಿಸಿದ್ದಾರೆ.
ಟಿ20 ವಿಶ್ವಕಪ್ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 7 ರನ್ಗಳಿಂದ ಅಮೋಘವಾಗಿ ಜಯಸಾಧಿಸಿತು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ರವೀಂದ್ರ ಜಡೇಜಾ ಅವರು ಕೂಡ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಸ್ವತಃ ಜಡೇಜಾ ಅವರೇ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ 2024ರ ಟಿ20 ವಿಶ್ವಕಪ್ ಜೊತೆಗೆ ಫೋಟೋ ಶೇರ್ ಮಾಡಿಕೊಂಡು, “ಹೃದಯ ತುಂಬಿದ ಧನ್ಯವಾದಗಳೊಂದಿಗೆ ನಾನು T20 ಅಂತರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳುತ್ತೇನೆ. ನಾನು ನನ್ನ ದೇಶಕ್ಕಾಗಿ ಅತ್ಯುತ್ತಮವಾದದ್ದನ್ನು ನೀಡಿದ್ದೇನೆ ಮತ್ತು ಇತರ ಸ್ವರೂಪಗಳಲ್ಲಿ ಅದನ್ನು ಮುಂದುವರಿಸುತ್ತೇನೆ. ಟಿ20 ವಿಶ್ವಕಪ್ ಗೆಲ್ಲುವುದು ನನ್ನ ಕನಸು ನನಸಾಗಿದೆ, ಇದು ನನ್ನ ಟಿ20 ಅಂತರರಾಷ್ಟ್ರೀಯ ವೃತ್ತಿಜೀವನದ ಉತ್ತುಂಗವಾಗಿದೆ. ನೆನಪುಗಳು, ಹರ್ಷೋದ್ಗಾರಗಳು ಮತ್ತು ಅಚಲ ಬೆಂಬಲಕ್ಕಾಗಿ ಧನ್ಯವಾದಗಳು. ” ಎಂದು ಬರೆದುಕೊಂಡಿದ್ದಾರೆ.