ವಾಷಿಂಗ್ಟನ್: ಲಂಚ ಹಗರಣದಲ್ಲಿ ಅದಾನಿ ಗ್ರೂಪ್ ವಿರುದ್ಧದ ದೋಷಾರೋಪಣೆ ನಿಕಟ ಮಿತ್ರ ರಾಷ್ಟ್ರ ಭಾರತದೊಂದಿಗಿನ ಸಂಬಂಧವನ್ನು ಅಪಾಯಕ್ಕೆ ಸಿಲುಕಿಸಬಹುದು ಎಂದು ಆರೋಪಿಸಿ ಅಮೆರಿಕದ ನ್ಯಾಯಾಂಗ ಇಲಾಖೆ ತೆಗೆದುಕೊಂಡ “ಪ್ರಶ್ನಾರ್ಹ” ನಿರ್ಧಾರಗಳ ವಿರುದ್ಧ ಆರು ಮಂದಿ ಯುಎಸ್ ಕಾಂಗ್ರೆಸ್ ಸದಸ್ಯರು ಹೊಸದಾಗಿ ನೇಮಕಗೊಂಡ ಯುನೈಟೆಡ್ ಸ್ಟೇಟ್ಸ್ ಅಟಾರ್ನಿ ಜನರಲ್ಗೆ ಪತ್ರ ಬರೆದಿದ್ದಾರೆ ಎನ್ನಲಾಗುತ್ತಿದೆ.
ಆರು ಮಂದಿ ಯುಎಸ್ ಕಾಂಗ್ರೆಸ್ ಸದಸ್ಯರಾದ ಲ್ಯಾನ್ಸ್ ಗುಡೆನ್, ಪ್ಯಾಟ್ ಫಾಲನ್, ಮೈಕ್ ಹರಿಡೋಪೋಲೋಸ್, ಬ್ರಾಂಡನ್ ಗಿಲ್, ವಿಲಿಯಂ ಆರ್ ಟಿಮ್ಮನ್ಸ್ ಮತ್ತು ಬ್ರಿಯಾನ್ ಬಾಬಿನ್ ಅವರು ಫೆಬ್ರವರಿ 10 ರಂದು ಯುಎಸ್ ಅಟಾರ್ನಿ ಜನರಲ್ ಪಮೇಲಾ ಬೇಡಿ ಅವರಿಗೆ, ಹಿಂದಿನ ಜೊ ಬೈಡನ್ ಆಡಳಿತದಲ್ಲಿ ನ್ಯಾಯಾಂಗ ಇಲಾಖೆ ತೆಗೆದುಕೊಂಡ ಕೆಲವು ಪ್ರಶ್ನಾರ್ಹ ನಿರ್ಧಾರಗಳ ಬಗ್ಗೆ ಗಮನ ಸೆಳೆಯುವ ರೀತಿ ಪತ್ರ ಬರೆದಿದ್ದಾರೆ.
ಸೌರಶಕ್ತಿ ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲಿ ಭಾರತೀಯ ಅಧಿಕಾರಿಗಳಿಗೆ 250 ಮಿಲಿಯನ್ ಡಾಲರ್ (ಸುಮಾರು 2,100 ಕೋಟಿ ರೂ.) ಲಂಚವನ್ನು ಗೌತಮ್ ಅದಾನಿ ನೀಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದನ್ನು ಯುಎಸ್ ಬ್ಯಾಂಕ್ಗಳು ಮತ್ತು ಹೂಡಿಕೆದಾರರಿಂದ ಮರೆಮಾಡಲಾಗಿದೆ ಎಂದು ಪ್ರಾಸಿಕ್ಯೂಟರ್ಗಳು ಆರೋಪಿಸಿದ್ದಾರೆ. ಆದರೆ ಅದಾನಿ ಗ್ರೂಪ್ ಈ ಆರೋಪಗಳನ್ನು ತಳ್ಳಿಹಾಕಿದೆ.