ತೀವ್ರ ಕುತೂಹಲ ಮೂಡಿಸಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವ ಸಂಬಂಧ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಒಮ್ಮತದ ನಿರ್ಣಯ ಕೈಗೊಂಡಿದೆ. ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಟ್ರೋಫಿಯಲ್ಲಿ ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡುವುದಕ್ಕೆ ಐಸಿಸಿ ಅನುಮತಿ ನೀಡಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ 2025 ರ ಚಾಂಪಿಯನ್ಸ್ ಟ್ರೋಫಿಗಾಗಿ ಹೈಬ್ರಿಡ್ ಮಾದರಿಯನ್ನು ಅನುಮೋದಿಸಿದೆ. ಪಿಸಿಬಿ ಮತ್ತು ಬಿಸಿಸಿಐ ಡುವಿನ ಒಪ್ಪಂದದ ನಂತರ ಪಾಕಿಸ್ತಾನ ಮತ್ತು ದುಬೈನಲ್ಲಿ ಪಂದ್ಯಗಳು ನಡೆಯಲಿದೆ.
ಈ ಒಪ್ಪಂದದ ಭಾಗವಾಗಿ 2026ರ ಟಿ20 ಟೂರ್ನಿಗೆ ಭಾರತಕ್ಕೆ ಪಾಕ್ ತಂಡ ಆಗಮಿಸುವುದಿಲ್ಲ. ಪಾಕಿಸ್ತಾನದ ಪಂದ್ಯಗಳು ಕೊಲಂಬೋದಲ್ಲಿ ನಡೆಯಲಿದೆ. ಈ ವ್ಯವಸ್ಥೆಗಾಗಿ ಪಿಸಿಬಿ ಯಾವುದೇ ಹಣಕಾಸಿನ ಪರಿಹಾರವನ್ನು ಪಡೆಯುವುದಿಲ್ಲವಾದರೂ 2027 ರ ನಂತರದ ಐಸಿಸಿ ಮಹಿಳಾ ಪಂದ್ಯಾವಳಿಯ ಹಕ್ಕುಗಳನ್ನು ಪಡೆದುಕೊಂಡಿದೆ.
Monday Tips: ಸೋಮವಾರ ಈ ಕೆಲಸ ಮಾಡಿದರೆ ಸಾಕು ಲಕ್ಷ್ಮೀ ಭಾಗ್ಯ ನಿಮ್ಮ ಮನೆಯಲ್ಲಿರುತ್ತೆ..!
ಒಪ್ಪಂದ ಅನ್ವಯ ಪಾಕಿಸ್ತಾನದ ಮೂರು ಸ್ಥಳಗಳಲ್ಲಿ ಪಂದ್ಯ ನಡೆದರೆ ಭಾರತದ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿದೆ. ಭಾರತ ಒಂದು ವೇಳೆ ಸೆಮಿ ಫೈನಲ್, ಫೈನಲ್ ಪ್ರವೇಶಿಸಿದರೆ ಆ ಪಂದ್ಯಗಳು ದುಬೈನಲ್ಲಿ ನಡೆಯಲಿದೆ. ಒಂದು ವೇಳೆ ಲೀಗ್ ಹಂತದಲ್ಲೇ ಭಾರತ ಟೂರ್ನಿಯಿಂದ ಹೊರಬಿದ್ದರೆ ಪಾಕಿಸ್ತಾನದ ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ಸೆಮಿಫೈನಲ್, ಫೈನಲ್ ಪಂದ್ಯ ನಡೆಯಲಿದೆ.
ಭಾರತ ಹೈಬ್ರಿಡ್ ಮಾದರಿ ಆಡುವಂತೆ ಪ್ರಸ್ತಾಪ ಇಟ್ಟಿತ್ತು. ಆದರೆ ಪಾಕಿಸ್ತಾನ ಈ ಪ್ರಸ್ತಾಪವನ್ನು ತಿರಸ್ಕರಿಸಿತ್ತು. 2023ರಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ಗೆ ಭಾರತ ಪ್ರವಾಸವನ್ನು ನಾವು ಕೈಗೊಂಡಿದ್ದೇವೆ. ಹೀಗಾಗಿ ಭಾರತ ನಮ್ಮ ದೇಶಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದಿತ್ತು. ಅಷ್ಟೇ ಅಲ್ಲದೇ ಯಾವುದೇ ಕಾರಣಕ್ಕೂ ಹೈಬ್ರಿಡ್ ಪಂದ್ಯ ನಡೆಸಲು ಒಪ್ಪಿಗೆ ಸೂಚಿಸುವುದಿಲ್ಲ ಎಂದು ಪಟ್ಟು ಹಿಡಿದಿತ್ತು. ಕೊನೆಗೆ ಭಾರತದ ವಾದಕ್ಕೆ ಪಿಸಿಬಿ ಮಣಿದಿದ್ದು ಹೈಬ್ರಿಡ್ ಮಾದರಿ ಟೂರ್ನಿಗೆ ಒಪ್ಪಿಗೆ ಸೂಚಿಸಿದೆ.
ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ನಂತರ ರಾಜತಾಂತ್ರಿಕ ಕಾರಣಗಳಿಂದಾಗಿ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ (ICC) ಟೂರ್ನಿ ಅಥವಾ ಏಷ್ಯಾ ಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ.