ಬೆಂಗಳೂರು: ನಿತ್ಯದ ಬದುಕಿನಲ್ಲಿ ಧುತ್ತೆಂದು ಬರುವ ಆರ್ಥಿಕ ಸಮಸ್ಯೆಗಳಿಗೆ ಹಣ ಬೇಕಾಗಬಹುದು ಎನ್ನುವ ಕಾರಣಕ್ಕೆ ಅನೇಕರು ಉಳಿತಾಯದ ಮೊತ್ತವನ್ನ ಫಿಕ್ಸೆಡ್ ಡಿಪಾಸಿಟ್ ನಲ್ಲಿ(ನಿಶ್ಚಿತ ಠೇವಣಿ) ಇಡುವುದಿಲ್ಲ. ತುರ್ತು ಅಗತ್ಯಗಳಿಗೆ ಬೇಕಿರುವ ಬಹುಪಾಲು ಹಣವನ್ನ ಸೇವಿಂಗ್ಸ್ ಬ್ಯಾಂಕ್ (ಉಳಿತಾಯ ಖಾತೆಯಲ್ಲಿ) ಅಕೌಂಟ್ ನಲ್ಲೇ ಇಟ್ಟು ಕೊಂಡಿರುತ್ತಾರೆ. ದೀರ್ಘಕಾಲದ ಉಳಿತಾಯಕ್ಕೆ ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ (ಐಪಿಪಿಬಿ) ಉಳಿತಾಯ ಯೋಜನೆಗಳು ಸಾಕಷ್ಟು ಜನಪ್ರಿಯತೆ ಗಳಿಸಿವೆ.
ಸಾಮಾನ್ಯ ಉಳಿತಾಯ ಖಾತೆಯ ಗ್ರಾಹಕರಿಗಿಂತ ಪ್ರೀಮಿಯಂ ಉಳಿತಾಯ ಖಾತೆ ಗ್ರಾಹಕರಿಗೆ ಹೆಚ್ಚುವರಿ ಸೇವೆಗಳನ್ನು ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಅಥವಾ ಆರೋಗ್ಯ ಸಮಸ್ಯೆ ಹೊಂದಿರೋರಿಗೆ ಅಂಚೆ ಕಚೇರಿಗೆ ತೆರಳುವುದು ಕಷ್ಟವಾಗುತ್ತದೆ. ಇಂಥವರು ಪ್ರೀಮಿಯಂ ಉಳಿತಾಯ ಖಾತೆ ತೆರೆದರೆ ಅವರ ಮನೆಗೆ ಬಾಗಿಲಿಗೆ ಅಂಚೆ ಇಲಾಖೆ ಸೇವೆಗಳನ್ನು ತಲುಪಿಸುತ್ತದೆ. ಹಾಗಾದ್ರೆ ಅಂಚೆ ಕಚೇರಿ ಪ್ರೀಮಿಯಂ ಉಳಿತಾಯ ಖಾತೆ ತೆರೆದರೆ ಯಾವೆಲ್ಲ ಪ್ರಯೋಜನಗಳಿವೆ? ಇಲ್ಲಿದೆ ಮಾಹಿತಿ.
ಪ್ರೀಮಿಯಂ ಖಾತೆ ಪ್ರಯೋಜನಗಳು
*ಮನೆ ಬಾಗಿಲಿನ ತನಕ ಉಚಿತ ಬ್ಯಾಂಕಿಂಗ್ ಸೌಲಭ್ಯ
*ನಗದು ಠೇವಣಿ ಹಾಗೂ ವಿತ್ ಡ್ರಾಗೆ ಉಚಿತ ಸೌಲಭ್ಯ
*ವರ್ಚುವಲ್ ಡೆಬಿಟ್ ಕಾರ್ಡ್ ಮೂಲಕ ಮಾಡಿದ ವಹಿವಾಟಿಗೆ ಕ್ಯಾಶ್ ಬ್ಯಾಕ್.
*ಎಲೆಕ್ಟ್ರಿಸಿಟಿ ಬಿಲ್ ಪಾವತಿ ಮೇಲೆ ಕ್ಯಾಶ್ ಬ್ಯಾಕ್
*ಡಿಜಿಟಲ್ ಜೀವನ ಪ್ರಮಾಣಪತ್ರ ಸಲ್ಲಿಕೆ ಮೇಲೆ ಕ್ಯಾಶ್ ಬ್ಯಾಕ್
*ಪ್ರೀಮಿಯಂ ಉಳಿತಾಯ ಖಾತೆಯನ್ನು ಅಂಚೆ ಇಲಾಖೆ ಉಳಿತಾಯ ಖಾತೆಯೊಂದಿಗೆ ಜೋಡಿಸಿ.
ಯಾರು ಈ ಖಾತೆ ತೆರೆಯಬಹುದು?
10 ವರ್ಷ ಮೇಲ್ಪಟ್ಟ ಯಾವುದೇ ಅಂಚೆ ಕಚೇರಿ ಗ್ರಾಹಕ ಪ್ರೀಮಿಯಂ ಉಳಿತಾಯ ಖಾತೆ ತೆರೆಯಬಹುದು. ಆದರೆ, ಕಡ್ಡಾಯವಾಗಿ ಕೆವೈಸಿ ಮಾಡಿಸಬೇಕು. ಪ್ರೀಮಿಯಂ ಉಳಿತಾಯ ಖಾತೆಯಲ್ಲಿ ವಾರ್ಷಿಕ ಕೇವಲ 2,000 ರೂ. ಬ್ಯಾಲೆನ್ಸ್ ನಿರ್ವಹಣೆ ಮಾಡಿದ್ರೆ ಸಾಕು.
ಪ್ರೀಮಿಯಂ ಖಾತೆ ತೆರೆಯಲು ಎಷ್ಟು ಪಾವತಿಸಬೇಕು?
ಹೊಸ ಗ್ರಾಹಕರಿಗೆ ಖಾತೆ ತೆರೆಯಲು 149ರೂ. ಶುಲ್ಕ ವಿಧಿಸಲಾಗುತ್ತದೆ. ಈಗಾಗಲೇ ಇರುವ ಗ್ರಾಹಕರಿಗೆ ಖಾತೆ ತೆರೆಯಲು 149ರೂ. ಶುಲ್ಕ ವಿಧಿಸಲಾಗುತ್ತದೆ. ಎಲ್ಲ ಗ್ರಾಹಕರಿಗೂ ವಾರ್ಷಿಕ ಚಂದಾದಾರಿಕೆ ನವೀಕರಣ ಶುಲ್ಕ 99ರೂ.
ಬಡ್ಡಿದರ ಎಷ್ಟು?
ಅಂಚೆ ಕಚೇರಿ ಪ್ರೀಮಿಯಂ ಉಳಿತಾಯ ಖಾತೆಯಲ್ಲಿ 1ಲಕ್ಷ ರೂ. ತನಕದ ಬ್ಯಾಲೆನ್ಸ್ ಗೆ ಶೇ.2ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಇನ್ನು 1ಲಕ್ಷ ರೂ. ಮೇಲ್ಪಟ್ಟ ಹಾಗೂ 2ಲಕ್ಷ ರೂ. ತನಕದ ಬ್ಯಾಲೆನ್ಸ್ ಗೆ ಶೇ.2.25 ಬಡ್ಡಿದರ ವಿಧಿಸಲಾಗುತ್ತದೆ.
ಏನಿದು ಮಾಸಿಕ ಆದಾಯ ಯೋಜನೆ?
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಅಥವಾ ಖಾತೆ ಹೂಡಿಕೆದಾರರಿಗೆ ನಿಗದಿತ ರಿಟರ್ನ್ ನೀಡುತ್ತದೆ. ಈ ಯೋಜನೆಯಡಿಯಲ್ಲಿ ನೀವು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಿದ್ರೆ ನಿಮಗೆ ಪ್ರತಿ ತಿಂಗಳು ನಿರ್ದಿಷ್ಟ ಮಾಸಿಕ ಆದಾಯ ಸಿಗುತ್ತದೆ. ಮಾಸಿಕ ಆದಾಯ ಖಾತೆ ತೆರೆಯಲು ಕನಿಷ್ಠ 1000 ರೂ. ಹೂಡಿಕೆ ಮಾಡೋದು ಅಗತ್ಯ.
ಆ ಬಳಿಕ ಖಾತೆದಾರರು ಒಂದು ಸಾವಿರ ರೂ.ಗಿಂತ ಹೆಚ್ಚಿನ ಮೊತ್ತವನ್ನು ಠೇವಣಿ ಇಡಬೇಕು. ಈ ನಿಯಮವು 2020ರ ಏಪ್ರಿಲ್ 1ರಿಂದ ಜಾರಿಗೆ ಬಂದಿದೆ. ಇನ್ನು ಒಂದು ಖಾತೆಯಲ್ಲಿ ಗರಿಷ್ಠ ಹೂಡಿಕೆ ಮಿತಿ 4.5ಲಕ್ಷ ರೂ. ಇನ್ನು ಜಂಟಿ ಖಾತೆಗಳಲ್ಲಿ ಹೂಡಿಕೆ ಮಿತಿ 9 ಲಕ್ಷ ರೂ. ಒಬ್ಬ ವ್ಯಕ್ತಿ ಎಂಐಎಸ್ ನಲ್ಲಿ ಗರಿಷ್ಠ 4.5ಲಕ್ಷ ರೂ. ಹೂಡಿಕೆ ಮಾಡಬಹುದು