ಹುಬ್ಬಳ್ಳಿ: ಗಣೇಶ ಹಬ್ಬದ ವೇಳೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಗದೊಂದು ಕೊಡುಗೆ ನೀಡಿದೆ. ಅದೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು̤ ಹಬ್ಬಕ್ಕೂ ಮುನ್ನ ರೈತರಿಗೆ ಹೆಸರು, ಉದ್ದು, ಸೋಯಾಬಿನ್, ಸೂರ್ಯಕಾಂತಿ ಬೆಳೆಗಳಿಗೆ ಬೆಂಬಲ ಬೆಲೆ ಕೊಡುಗೆ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ಹುಬ್ಬಳ್ಳಿ-ಪುಣೆ ಮಧ್ಯೆ ವಂದೇ ಭಾರತ್ ರೈಲು ಸಂಚಾರದ ಮತ್ತೊಂದು ಗಿಫ್ಟ್ ನೀಡಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಪ್ರಸ್ತಾವನೆಗೆ ಸ್ಪಂದಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು,
ಹುಬ್ಬಳ್ಳಿ – ಪುಣೆ ಮಧ್ಯೆ 2ನೇ ವಂದೇ ಭಾರತ್ ರೈಲು ಆರಂಭಿಸುವ ಶುಭ ಸಂದೇಶ ನೀಡಿದ್ದಾರೆ. ಶೀಘ್ರದಲ್ಲೇ ಹುಬ್ಬಳ್ಳಿ-ಪುಣೆ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಧಾರವಾಡ ಸಂಸದರೂ ಆಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮಾಹಿತಿ ನೀಡಿದ್ದಾರೆ.
ಮನವಿ ಸಲ್ಲಿಸಿದ್ದ ಜೋಶಿ:
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹುಬ್ಬಳ್ಳಿ-ಪುಣೆ ಮಧ್ಯೆ ವಂದೇ ಭಾರತ್ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳುವಂತೆ ಅಶ್ವಿನಿ ವೈಷ್ಣವ್ ಅವರಿಗೆ ಜುಲೈ ಮೊದಲ ವಾರದಲ್ಲಷ್ಟೇ ಪತ್ರ ಬರೆದು ಮನವಿ ಮಾಡಿದ್ದರು. ರಾಜ್ಯದಲ್ಲಿ ಬೆಂಗಳೂರು ನಂತರ ಪ್ರಮುಖ ವಾಣಿಜ್ಯ ನಗರಿ ಎಂಬ ಹೆಗ್ಗಳಿಕೆ ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕಿದೆ. ಅಲ್ಲದೇ, ವಂದೇ ಭಾರತ್ ರೈಲು ಸಂಚಾರದಿಂದ ಈ ಭಾಗದ ವಾಣಿಜ್ಯೋದ್ಯಮ, ಕೈಗಾರಿಕಾ ವಸಾಹತು ಬೆಳವಣಿಗೆಗೆ ಅನುಕೂಲ ಆಗುತ್ತದೆ ಎಂದು ಸಚಿವ ಜೋಶಿ ಕೇಂದ್ರದ ಗಮನ ಸೆಳೆದಿದ್ದರು.
ಹುಬ್ಬಳ್ಳಿಯಿಂದ ಮುಂಬೈ ಸಂಪರ್ಕಕ್ಕೂ ಈ ಮಾರ್ಗ ಅತ್ಯಂತ ಪ್ರಮುಖವಾಗಲಿದೆ ಎಂಬುದನ್ನು ಜೋಶಿ ಅವರು ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟು ವಂದೇ ಭಾರತ್ ರೈಲು ಸಂಚಾರ ಆರಂಭಕ್ಕೆ ಒತ್ತಾಯಿಸಿದ್ದರು. ಹುಬ್ಬಳ್ಳಿ-ಧಾರವಾಡದ ಜನರಿಗೆ ಹಬ್ಬದ ಈ ಶುಭ ಸಂದರ್ಭದಲ್ಲಿ ವಂದೇ ಭಾರತ್ ರೈಲು ಸಂಚಾರ ಸಿಹಿ ಸುದ್ದಿಯಾಗಿದ್ದು, ಶೀಘ್ರದಲ್ಲಿಯೇ ಹುಬ್ಬಳ್ಳಿ – ಪುಣೆ ನಡುವೆ ಹುಬ್ಬಳ್ಳಿಯ 2ನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚರಿಸಲಿದೆ ಎಂದು ಸಚಿವ ಜೋಶಿ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
ಉದ್ಘಾಟನೆ ದಿನ, ವೇಳಾಪಟ್ಟಿ ಶೀಘ್ರ ಪ್ರಕಟ:
ವಂದೇ ಭಾರತ್ ರೈಲು ಸಂಚಾರದ ಉದ್ಘಾಟನೆ ದಿನ ಮತ್ತು ವೇಳಾ ಪಟ್ಟಿಯನ್ನು ರೈಲ್ವೆ ಇಲಾಖೆ ಆದಷ್ಟು ಬೇಗ ಪ್ರಕಟಿಸಲಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.
ಪ್ರಧಾನಿಗೆ, ರೈಲ್ವೆ ಸಚಿವರಿಗೆ ಧನ್ಯವಾದ:
ನಮ್ಮ ವಿಭಾಗದ ರೇಲ್ವೆ ಅಭಿವೃದ್ಧಿಗೆ, ವಿಕಾಸಕ್ಕೆ ಪ್ರಧಾನಿ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಮೂಲಕ ಮಹತ್ವದ ಕೊಡುಗೆ ನೀಡಿದ್ದು, ಉತ್ತರ ಕರ್ನಾಟಕ ಜನರ ಪರವಾಗಿ ಧನ್ಯವಾದ ಅರ್ಪಿಸುವೆ ಎಂದು ತಿಳಿಸಿದ್ದಾರೆ.