50 ರನ್ಗಳಿಂದ ಬಾಂಗ್ಲಾ ತಂಡವನ್ನು ಮಣಿಸಿ ಟೀಮ್ ಇಂಡಿಯಾ ಸೆಮಿಫೈನಲ್ಗೇರಿದೆ.
ಸೂಪರ್ 8 ಸುತ್ತಿನಲ್ಲಿ ಭಾರತ ಇದುವರೆಗೆ 2 ಪಂದ್ಯಗಳನ್ನು ಆಡಿದ್ದು, ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಅಷ್ಟೇ ಇಲ್ಲದೆ ಈ ಎರಡು ಪಂದ್ಯಗಳನ್ನು ಅತ್ಯುತ್ತಮ ನೆಟ್ ರನ್ರೇಟ್ನೊಂದಿಗೆ ಗೆದ್ದಿದೆ. ಹೀಗಾಗಿ ಭಾರತ ಸೆಮೀಸ್ಗೇರುವುದು ಖಚಿತವಾಗಿದೆ. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ (Team India) 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 196 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 146 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಈ ಮೂಲಕ ಬಾಂಗ್ಲಾ ತಂಡದ ಸೆಮಿಫೈನಲ್ ಕನಸು ಭಗ್ನಗೊಂಡಿತು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 196 ರನ್ ಗಳಿಸಿತು. ಬಾಂಗ್ಲಾದೇಶದ ವಿರುದ್ಧ ಟೀಂ ಇಂಡಿಯಾದ ಎಲ್ಲಾ ಬ್ಯಾಟ್ಸ್ಮನ್ಗಳು ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಸೂರ್ಯಕುಮಾರ್ ಯಾದವ್ ಹೊರತುಪಡಿಸಿ ಉಳಿದವರೆಲ್ಲರೂ ಎರಡಂಕಿ ಮೊತ್ತ ಕಲೆಹಾಕಿದರು. ತಂಡದ ಪರ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಉತ್ತಮ ಆರಂಭ ನೀಡಿದರು. ಈ ಆರಂಭದ ಲಾಭವನ್ನು ಪಡೆದುಕೊಂಡು ಪ್ರತಿಯೊಬ್ಬ ಬ್ಯಾಟ್ಸ್ಮನ್ಗಳು ಟಾಪ್ ಗೇರ್ನಲ್ಲಿ ಬ್ಯಾಟ್ ಮಾಡಿದರು. ಹೀಗಾಗಿ ಟೀಂ ಇಂಡಿಯಾ ಬೃಹತ್ ಮೊತ್ತ ಕಲೆಹಾಕಿತು.
ಟೀಂ ಇಂಡಿಯಾ ಪರ ಉಪನಾಯಕ ಹಾರ್ದಿಕ್ ಪಾಂಡ್ಯ ಇನಿಂಗ್ಸ್ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಹಾರ್ದಿಕ್ 24 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ಗಳ ನೆರವಿನಿಂದ ಅಜೇಯ 50 ರನ್ ಬಾರಿಸಿದರು. ನಾಯಕ ರೋಹಿತ್ ಶರ್ಮಾ 23, ವಿರಾಟ್ ಕೊಹ್ಲಿ 37, ರಿಷಬ್ ಪಂತ್ 36, ಸೂರ್ಯಕುಮಾರ್ ಯಾದವ್ 6 ಮತ್ತು ಶಿವಂ ದುಬೆ 34 ರನ್ಗಳ ಕಾಣಿಕೆ ನೀಡಿದರು. ಬಾಂಗ್ಲಾದೇಶ ಪರ ರಿಷಾದ್ ಹೊಸೈನ್ ಮತ್ತು ತಂಜಿಮ್ ಹಸನ್ ಸಾಕಿಬ್ ತಲಾ 2 ವಿಕೆಟ್ ಪಡೆದರೆ, ಶಕೀಬ್ ಅಲ್ ಹಸನ್ 1 ವಿಕೆಟ್ ಪಡೆದರು.