ಪ್ರಧಾನ ಮಂತ್ರಿ ಅಟಲ್ ಪೆನ್ಷನ್ ಯೋಜನಾ ಸರ್ಕಾರದಿಂದ ನಡೆಸಲಾಗುವ ವೃದ್ಧಾಪ್ಯ ಪಿಂಚಣಿ ಯೋಜನೆಗಳಲ್ಲಿ ಒಂದು. ಎಂಟು ವರ್ಷದ ಹಿಂದೆ ಶುರುವಾದ ಈ ಯೋಜನೆ ಎಲ್ಲರಿಗೂ ಮುಕ್ತವಿದೆ. ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಬಹಳ ಅನುಕೂಲವಾಗಿರುವ ಪೆನ್ಷನ್ ಸ್ಕೀಮ್ ಇದು. 18 ವರ್ಷದಿಂದ 40 ವರ್ಷದ ವಯೋಮಾನದ ಯಾವುದೇ ಭಾರತೀಯ ಪ್ರಜೆ ಅಟಲ್ ಪೆನ್ಷನ್ ಯೋಜನೆಯಲ್ಲಿ ನೊಂದಾಯಿಸಿಕೊಳ್ಳಬಹುದು.
ಕನಿಷ್ಠ 20 ವರ್ಷ ಅವಧಿಯವರೆಗೆ ಪೆನ್ಷನ್ ನಿಧಿಗೆ ಹಣ ಪೂರೈಸಬೇಕು. ಅಟಲ್ ಪೆನ್ಷನ್ ಯೋಜನೆಯ ಸದಸ್ಯರು 60 ವರ್ಷದ ಬಳಿಕ ಪ್ರತೀ ತಿಂಗಳು 1,000 ರೂನಿಂದ 5,000 ರೂವರೆಗೆ ಕನಿಷ್ಠ ಖಾತ್ರಿ ಪಿಂಚಣಿ ಪಡೆಯಬಹುದು. ಅಸಂಘಟಿತ ವಲಯದ ಕಾರ್ಮಿಕರಿಗೆ ಮತ್ತು ಆದಾಯ ತೆರಿಗೆ ಪಾವತಿಸುವವರಲ್ಲದವರಿಗೆ ಸರ್ಕಾರ ವರ್ಷಕ್ಕೆ ಒಂದು ಸಾವಿರ ರೂವರೆಗೂ ಕೊಡುಗೆ ನೀಡುತ್ತದೆ.
ಈ ಯೋಜನೆ ಪಡೆಯಲು ಕನಿಷ್ಠ ವಯಸ್ಸು 18 ವರ್ಷ ಇರುತ್ತದೆ. 60ರ ವಯಸ್ಸಿನವರೆಗೂ ಕೊಡುಗೆ ನೀಡುತ್ತಾ ಹೋಗಬಹುದು. 18ನೇ ವಯಸ್ಸಿನಲ್ಲಿ ಈ ಸ್ಕೀಮ್ ಪಡೆದರೆ ಒಟ್ಟು42 ವರ್ಷ ಕಾಲ ಹೂಡಿಕೆ ಮಾಡಲು ಗರಿಷ್ಠ ಅವಕಾಶ ಇರುತ್ತದೆ.
ನಿಮ್ಮ ವಯಸ್ಸು 30 ವರ್ಷವಾಗಿದ್ದರೆ 30 ವರ್ಷ ಹೂಡಿಕೆಗೆ ಅವಕಾಶ ಇರುತ್ತದೆ. ನಿವೃತ್ತಿ ಬಳಿಕ ನೀವು 1,000 ರೂ ಪಿಂಚಣಿ ಪಡೆಯಬೇಕೆಂದರೆ 30ನೇ ವಯಸ್ಸಿನಿಂದ ಆರಂಭಿಸಿ ಪ್ರತೀ ತಿಂಗಳು 116 ರೂ ಕಟ್ಟಬೇಕು. 40ನೇ ವಯಸ್ಸಿನಲ್ಲಿ ಈ ಯೋಜನೆ ಸ್ವೀಕರಿಸಿದರೆ 1,000 ಪಿಂಚಣಿ ಪಡೆಯಲು 20 ವರ್ಷ ಕಾಲ ತಿಂಗಳಿಗೆ 264 ರೂ ಕಟ್ಟಿಕೊಂಡು ಹೋಗಬೇಕು.
ಇನ್ನು, 5,000 ರೂ ಮಾಸಿಕ ಪಿಂಚಣಿ ಬೇಕೆಂದರೆ, 30ನೇ ವಯಸ್ಸಿನಿಂದ 30 ವರ್ಷ ಕಾಲ ತಿಂಗಳಿಗೆ 577 ರೂ ಕಟ್ಟಬೇಕು. 40ನೇ ವಯಸ್ಸಿನಲ್ಲಿ ಸ್ಕೀಮ್ ಆರಂಭಿಸಿದರೆ ತಿಂಗಳಿಗೆ 1,318 ರೂ ಕಟ್ಟಬೇಕು.
ಒಂದು ವೇಳೆ ಸದಸ್ಯನು ಮೃತಪಟ್ಟರೆ ನಾಮಿನಿಗೆ ಪರಿಹಾರ ಸಿಗುತ್ತದೆ. 1,000 ರೂ ಮಾಸಿಕ ಪಿಂಚಣಿ ಪಡೆಯುತ್ತಿರುವವರು ಮೃತಪಟ್ಟರೆ ನಾಮಿನಿಗೆ 1.7 ಲಕ್ಷ ರೂ ಸಿಗುತ್ತದೆ. 5,000 ರೂ ಮಾಸಿಕ ಪೆನ್ಷನ್ ಪಡೆಯುತ್ತಿರುವವರು ಮೃತಪಟ್ಟರೆ ಅವರ ವಾರಸುದಾರರಿಗೆ 8.5 ಲಕ್ಷ ರೂ ಸಿಗುತ್ತದೆ.
ಅಟಲ್ ಪೆನ್ಷನ್ ಯೋಜನೆ ಅರ್ಜಿ ಸಲ್ಲಿಕೆ ಹೇಗೆ?
ಯಾವುದೇ ರಾಷ್ಟ್ರೀಕೃತ ಬ್ಯಾಂಕ್ಗೆ ಹೋಗಿ ಅಲ್ಲಿ ಈ ಸ್ಕೀಮ್ ಆರಂಭಿಸಬಹುದು. ಸಂಬಂಧಿತ ಅರ್ಜಿ ಭರ್ಜಿ ಮಾಡಿ, ಜೊತೆಯಲ್ಲಿ ಆಧಾರ್ ದಾಖಲೆಯನ್ನು ಲಗತ್ತಿಸಿ ಬ್ಯಾಂಕ್ನಲ್ಲಿ ಸಲ್ಲಿಸಬೇಕು. ಆನ್ಲೈನ್ನಲ್ಲಿ ಈ ಸ್ಕೀಮ್ ಪಡೆಯಲು ಆಗುವುದಿಲ್ಲ.