ಚಿಕಾಗೋ: 10 ತಿಂಗಳ ಹೆಣ್ಣು ಮಗುವಿನ ಬೆನ್ನಿಗೆ ಅಂಟಿಕೊಂಡಿದ್ದ ಅವಳಿ ಮಗುವಿನ ಅಂಗಾಂಗಗಳನ್ನ ಬೇರ್ಪಡಿಸಿ ತೆಗೆಯುವಲ್ಲಿ ಚಿಕಾಗೋ ವೈದ್ಯರು ಯಶಸ್ವಿಯಾಗಿದ್ದಾರೆ. ಪುಟ್ಟ ಮಗು ಡೊಮಿನಿಕ್ಯೂ ಹುಟ್ಟಿದಾಗಿನಿಂದಲೂ ಸಂಪೂರ್ಣವಾಗಿ ಬೆಳವಣಿಯಾಗದ ಕಾರಣ ಅವಳಿ ಮಗುವಿನ ಕಾಲುಗಳನ್ನ ಬೆನ್ನಿನಲ್ಲಿ ಹೊತ್ತುಕೊಂಡಿತ್ತು.
ಈ ರೀತಿ ಒಂದು ಮಗುವಿನ ದೇಹದಲ್ಲಿ ಕೂಡಿಕೊಂಡ ಅವಳಿ ಮಗುವನ್ನು ವೈದ್ಯರು ಪ್ಯರಾಸಿಟಿಕ್ ಟ್ವಿನ್(ಪರಾವಲಂಬಿ ಅವಳಿ ಮಗು) ಎಂದು ಕರೆದಿದ್ದು, ಈ ರೀತಿಯ ಪ್ರಕರಣಗಳು ತುಂಬಾ ವಿರಳ ಎಂದಿದ್ದಾರೆ. ಅದರಲ್ಲೂ ಬೆನ್ನು ಮೂಳೆಯಲ್ಲಿ ಕೂಡಿಕೊಂಡ ಅವಳಿ ಮಕ್ಕಳ ಪ್ರಕರಣ ಅತ್ಯಂತ ವಿರಳ. ಇಂತಹ ಪ್ರಕರಣಗಳು ವರದಿಯಾಗಿರುವುದು 30ಕ್ಕಿಂತ ಕಡಿಮೆ ಎಂದಿದ್ದಾರೆ.
10 ತಿಂಗಳ ಮಗು ಡೊಮಿನಿಕ್ಯೂವನ್ನು ಶಸ್ತ್ರಚಿಕಿತ್ಸೆಗಾಗಿ ಫೆಬ್ರವರಿಯಲ್ಲಿ ವೆಸ್ಟ್ ಆಫ್ರಿಕಾದ ಐವರಿ ಕೋಸ್ಟ್ನಿಂದ 5 ಸಾವಿರ ಮೈಲಿ ದೂರದ ಚಿಕಾಗೋದ ಅಡ್ವೋಕೇಟ್ ಚಿಲ್ಡ್ರೆನ್ಸ್ ಹಾಸ್ಪಿಟಲ್ಗೆ ಕರೆತರಲಾಗಿತ್ತು. ಡೊಮಿನಿಕ್ಯೂ ಪೋಷಕರು ಮಗುವಿನ ಶಸ್ತ್ರಚಿಕಿತ್ಸೆಗಾಗಿ ಚಿಕಾಗೋದಲ್ಲಿ ಉಳಿದುಕೊಳ್ಳಲು ಸ್ವಾಬ್ ಎಂಬವರು ಸಹಾಯ ಮಾಡಿದ್ರು.
ಮಧುಮೇಹಿಗಳು ಖರ್ಜೂರವನ್ನು ತಿನ್ನಬಹುದಾ!? – ಇಲ್ಲಿದೆ ಉಪಯುಕ್ತ ಮಾಹಿತಿ
ಡೊಮಿನಿಕ್ಯೂ ದೇಹಕ್ಕೆ ಅಂಟಿಕೊಂಡ ಅವಳಿ ಮಗುವಿನ ಅಂಗಾಗವನ್ನು ತೆಗೆಯಲು ಶಸ್ತ್ರಚಿಕಿತ್ಸೆ ಅಗತ್ಯ. ಇಲ್ಲವಾದ್ರೆ ಅವಳಿ ಮಗುವಿನ ಕಾಲುಗಳಿಗೆ ಶಕ್ತಿ ನೀಡಲು ಅದರ ಹೃದಯ ಹಾಗೂ ಶ್ವಾಸಕೋಶಗಳಿಗೆ ಕಷ್ಟವಾಗಿ ಡೊಮಿನಿಕ್ಯೂ ಹೆಚ್ಚು ದಿನ ಬದುಕಲಾರದು ಅಂತ ವೈದ್ಯರು ಹೇಳಿದ್ದರು. ವೈದ್ಯರು ಡೊಮಿನಿಕ್ಯೂಗೆ ಹಲವು ರೀತಿಯ ವೈದ್ಯಕೀಯ ಪರೀಕ್ಷೆಗಳನ್ನ ಮಾಡಿದ್ರು.
ಅವಳಿ ಮಗುವಿನ ಸೊಂಟದ ಭಾಗ, ಮೂತ್ರಕೋಶ, ಕಾಲುಗಳು ಹಾಗೂ ಬೆನ್ನುಮೂಳೆ ಡೊಮಿನಿಕ್ಯೂ ದೇಹಕ್ಕೆ ಅಂಟಿಕೊಂಡಿತ್ತು. ಇದನ್ನು ಬೇರ್ಪಡಿಸುವುದು ವೈದ್ಯರಿಗೆ ದೊಡ್ಡ ಸವಾಲಾಗಿತ್ತು. ಹೀಗಾಗಿ ಡೊಮಿನಿಕ್ಯೂನ 3ಡಿ ಮಾಡೆಲ್ ತಯಾರಿಸಿ ಹೇಗೆ ಶಸ್ತ್ರಚಿಕಿತ್ಸೆ ಮಾಡಬಹುದು ಎಂಬುದನ್ನ ವೈದ್ಯರು ಪ್ರಯೋಗ ಮಾಡಿದ್ದರು.
ಅವಳಿ ಮಗುವಿನ ಕಾಲುಗಳು ಚೆನ್ನಾಗಿಯೇ ಕಾರ್ಯ ನಿರ್ವಹಿಸುತ್ತಿದ್ದು, ಅದರ ನರ ಡೊಮಿನಿಕ್ಯೂ ಬೆನ್ನು ಮೂಳೆಯೊಂದಿಗೆ ಜೋಡಣೆಯಾಗಿತ್ತು. ಹೀಗಾಗಿ ಬೆನ್ನು ಮೂಳೆಯ ಮೇಲೆ ಒತ್ತಡ ಉಂಟಾದ್ರೆ ಡೊಮಿನಿಕ್ಯೂ ಪಾಶ್ರ್ವವಾಯುವಿಗೆ ತುತ್ತಾಗುವ ಸಂಭವವಿತ್ತು. ಹೀಗಾಗಿ ವೈದ್ಯರು ಅತ್ಯಂತ ಎಚ್ಚರಿಕೆಯಿಂದ 6 ಗಂಟೆಗಳ ಕಾಲ ಮಗುವಿನ ಶಸ್ತ್ರಚಿಕಿತ್ಸೆ ಮಾಡಿದ್ರು.
ಸೊಂಟದ ಭಾಗ, ನರ ಹಾಗೂ ರಕ್ತನಾಳಗಳನ್ನ ಕಡಿತಗೊಳಿಸಿ ನಂತರ ಡೊಮಿನಿಕ್ಯೂ ದೇಹಕ್ಕೆ ಅಂಟಿಕೊಂಡಿದ್ದ ಅವಳಿ ಮಗುವಿನ ಅಂಗಾಂಗಗಳನ್ನು ಹೊರತೆಗೆದರು. ಈಗ ಡೊಮಿನಿಕ್ಯೂ ಕತ್ತಿನ ಭಾಗದಲ್ಲಿ ಊದಿಕೊಂಡಿರೋದು ಬಿಟ್ಟರೆ ಸಾಮಾನ್ಯ ಮಗುವಿನಂತೆಯೇ ಕಾಣುತ್ತಿದೆ. ಆದರೆ ದೇಹದೊಳಗೆ ಇನ್ನೂ ಕೆಲವು ನ್ಯೂನತೆಗಳಿವೆ. ಶೀಘ್ರದಲ್ಲೇ ಮಗು ಗುಣಮುಖವಾಗಿ ಸಾಮಾನ್ಯ ಮಕ್ಕಳಂತೆ ಬದುಕಬೇಕೆಂದು ಬಯಸುತ್ತೇವೆ ಅಂತ ವೈದ್ಯರು ಹೇಳಿದ್ದಾರೆ.