ಬೆಂಗಳೂರು: ಅರ್ಹ ಪತ್ರಕರ್ತರಿಗೆ ಪ್ರಶಸ್ತಿ ಅರಸಿ ಬಂದಿರುವುದು ಶ್ಲಾಘನೀಯ ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದ ಅವರು, ಪತ್ರಕರ್ತರು ಸಮಾಜದ ಮತ್ತು ಸರ್ಕಾರದ ಅಂಕು-ಡೊಂಕುಗಳನ್ನು ತಿದ್ದುವವರಾಗಿದ್ದು, ವೃತ್ತಿ ಬದ್ಧತೆ ಕಾಪಾಡಿಕೊಳ್ಳಬೇಕು. ಈ ಬಾರಿ ಸಮರ್ಥ ಪತ್ರಕರ್ತರಿಗೆ ಪ್ರಶಸ್ತಿಗಳು ಅರಸಿ ಬಂದಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಇಂದಿನ ಸಮಾಜದಲ್ಲಿ ಪತ್ರಕರ್ತರು ದಿಟ್ಟತನದಿಂದ ಕಾರ್ಯ ನಿರ್ವಹಿಸಬೇಕಾದುದು ಅತ್ಯಗತ್ಯ. ಹಾಗಾಗಿ ಸಮರ್ಥರಿಗೆ ಮನ್ನಣೆ ನೀಡಬೇಕಾದುದು ಎಲ್ಲರ ಕರ್ತವ್ಯ ಎಂದು ಅವರು ಹೇಳಿದರು.
ನಾನು ಸದನಕ್ಕೆ ಬಂದ ಹೊಸದರಲ್ಲಿ ಏನೇನು ತಪ್ಪು ಮಾಡಿದೆ ಎನ್ನುವುದನ್ನು ಹಿರಿಯ ಪತ್ರಕರ್ತರೇ ತಿದ್ದಿ ಹೇಳುತ್ತಿದ್ದರು. ಹಾಗಾಗಿ ಬಹಳ ಕಲಿಯಲು ಸಾಧ್ಯವಾಯಿತು. ವೃತ್ತಿಪರವಾಗಿ ಅಷ್ಟು ಪ್ರಬುದ್ಧತೆ ಹೊಂದಿದ ಪತ್ರಕರ್ತರು ಇದ್ದರು. ಈಗ ಆ ಸಂಖ್ಯೆ ಇಳಿಮುಖವಾಗುತ್ತಿದೆ ಎಂದರು.