ಅಬುಜಾ: ವಾಯವ್ಯ ನೈಜೀರಿಯಾದ ಜಂಫರಾ ರಾಜ್ಯದಲ್ಲಿ ಮಿಲಿಟರಿ ಯುದ್ಧವಿಮಾನ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 16 ನಾಗರಿಕರು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಆತ್ಮರಕ್ಷಣಾ ಪಡೆಗಳನ್ನು ಕ್ರಿಮಿನಲ್ ಗ್ಯಾಂಗ್ ಎಂದು ತಪ್ಪು ಗ್ರಹಿಸಿದ ಯುದ್ಧವಿಮಾನದ ಪೈಲಟ್ ಬಾಂಬ್ ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ವಾಯವ್ಯ ಮತ್ತು ಮಧ್ಯ ನೈಜೀರಿಯಾದಲ್ಲಿ ಗ್ರಾಮಗಳ ಮೇಲೆ ದಾಳಿ ನಡೆಸಿ, ಮನೆಗಳನ್ನು ಲೂಟಿ ಮಾಡುವುದಲ್ಲದೆ ಸ್ಥಳೀಯರನ್ನು ಹತ್ಯೆ ಮಾಡುವ ಕ್ರಿಮಿನಲ್ ಗ್ಯಾಂಗ್ನ ವಿರುದ್ಧ ನೈಜೀರಿಯಾದ ಮಿಲಿಟರಿ ಹೋರಾಟ ನಡೆಸುತ್ತಿದೆ. ಝುರ್ಮಿ ಜಿಲ್ಲೆಯ ಡಂಗೆಬೆ ಗ್ರಾಮದ ಮೇಲೆ ದಾಳಿ ನಡೆಸಿ ಮನೆಗಳಿಗೆ ಬೆಂಕಿ ಹಚ್ಚಿ ಜಾನುವಾರುಗಳನ್ನು ಹೊತ್ತೊಯ್ದ ದುಷ್ಕರ್ಮಿಗಳನ್ನು ಎದುರಿಸಲು ಸ್ಥಳೀಯರು ಗುಂಪು ಸೇರಿದ್ದರು. ದುಷ್ಕರ್ಮಿಗಳನ್ನು ಗ್ರಾಮದಿಂದ ಓಡಿಸಿದ ಬಳಿಕ ಹಿಂತಿರುಗುತ್ತಿದ್ದ ಗುಂಪಿನ ಮೇಲೆ ಯುದ್ಧವಿಮಾನ ಬಾಂಬ್ ಹಾಕಿದೆ ಎಂದು ವರದಿಯಾಗಿದೆ.
ಬಾಂಬ್ ದಾಳಿಯ ಬಳಿಕ 16 ಮೃತದೇಹಗಳನ್ನು ಪತ್ತೆಹಚ್ಚಲಾಗಿದ್ದು ತೀವ್ರ ಗಾಯಗೊಂಡ ಹಲವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ. ಬಾಂಬ್ ದಾಳಿಯಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿರುವುದಾಗಿ ಆಮ್ನೆಸ್ಟಿ ಇಂಟರ್ನ್ಯಾಷನಲ್ ಹೇಳಿದ್ದು ವೈಮಾನಿಕ ದಾಳಿಯ ಬಗ್ಗೆ ತಕ್ಷಣ ಪಾರದರ್ಶಕ ತನಿಖೆ ನಡೆಸಿ ಹೊಣೆಗಾರರನ್ನು ಗುರುತಿಸಬೇಕು ಎಂದು ಆಗ್ರಹಿಸಿದೆ.