ನಟ ಶಿವರಾಜ್ ಕುಮಾರ್ ಅವರ ಹೊಸ ಸಿನಿಮಾ ಘೋಷಣೆಯಾಗಿದ್ದು, ದರ್ಶನ್ ಅವರ ಸಹೋದರ ಖ್ಯಾತ ನಿರ್ದೇಶಕ ದಿನಕರ್ ತೂಗುದೀಪ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಹೊಸ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಶಿವಣ್ಣ ತಮ್ಮ ಅಭಿಮಾನಿಗಳಿಗೆ ಸ್ಪೆಷಲ್ ಟ್ರೀಟ್ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಶಿವಣ್ಣಗೆ ದಿನಕರ್ ತೂಗುದೀಪ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಎಂಬ ಕಾರಣಕ್ಕೆ ಚಿತ್ರದ ಬಗ್ಗೆ ಕುತೂಹಲ ಮೂಡಿದೆ.
ಬಿಂದ್ಯಾ ಮೂವೀಸ್ ಲಾಂಛನದಲ್ಲಿ ಆರ್. ಕೇಶವ್ ಹಾಗೂ ಬಿ.ಎಸ್ ಸುಧೀಂದ್ರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರ ಮಾಸ್ ಹಾಗೂ ಕಮರ್ಷಿಯಲ್ ಕಥಾಹಂದರ ಹೊಂದಿರಲಿದ್ದು, ಪ್ರಿಯದರ್ಶಿನಿ ರಾಮರೆಡ್ಡಿ ಕಥೆ ಹೆಣೆದಿದ್ದಾರೆ. ಈಗಾಗಲೇ ಪ್ರೀ ಪ್ರೊಡಕ್ಷನ್ ವರ್ಕ್ ಭರದಿಂದ ಸಾಗಿದೆ. ಶಿವಣ್ಣ ಜೊತೆ ದೊಡ್ಡ ತಾರಾಬಳಗ ಇರಲಿದೆ. ಚಿತ್ರದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ. ಶಿವರಾತ್ರಿ ಹಬ್ಬಕ್ಕೆ ಚಿತ್ರದ ಟೈಟಲ್ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಈ ಹಿಂದೆ ನಟ ಪುನೀತ್ ರಾಜ್ಕುಮಾರ್ ಹಾಗೂ ದಿನಕರ್ ತೂಗುದೀಪ ಅವರ ಕಾಂಬಿನೇಷನ್ನ ಸಿನಿಮಾ ಅನೌನ್ಸ್ ಆಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ಸಮಯಕ್ಕೆ ಆ ಸಿನಿಮಾ ರಿಲೀಸ್ ಆಗಿ ಬ್ಲಾಕ್ ಬಸ್ಟರ್ ಆಗಬೇಕಿತ್ತು. ಆದರೆ, ಅಪ್ಪು ಅಗಲಿಕೆಯಿಂದ ಆ ಚಿತ್ರ ಹಾಗೆಯೇ ಉಳಿಯಿತು. ಇದೀಗ, ಶಿವಣ್ಣರಿಗೆ ದಿನಕರ್ ನಿರ್ದೇಶನ ಮಾಡುತ್ತಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.