ಬೆಂಗಳೂರು: ಅಕ್ರಮ ವಿದ್ಯುತ್ ಸಂಪರ್ಕ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರು, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರನ್ನು ಕರೆಂಟ್ ಕಳ್ಳ ಎಂದು ಬಿತ್ತಿಪತ್ರ ಅಂಟಿಸಿದ್ದಕ್ಕೆ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದ ಗೋಡೆಗಳಿಗೆ ಪೋಸ್ಟರ್ ಅಂಟಿಸಿದ್ದು, ಈ ಸಂಬಂಧ ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಮೇಶ್ಗೌಡ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಕಾಂಗ್ರೆಸ್ ಕಾರ್ಯಕರ್ತರಾದ ಬಿಂದುಗೌಡ, ನವೀನ್ಗೌಡ ಸೇರಿದಂತೆ ಒಟ್ಟು 6 ಜನರು ವಿರುದ್ಧ ಎಫ್ಐಆರ್ ದಾಖಲಾಗಿದೆ.
ಜೆಡಿಎಸ್ ಕಚೇರಿಗೆ ಅತಿಕ್ರಮ ಪ್ರವೇಶ ಮಾಡಿ ಪೋಸ್ಟರ್ ಅಂಟಿಸಿದ್ದಾರೆ. ಹಾಗೂ ಇದನ್ನು ತಡೆಯಲು ಬಂದ ಸೆಕ್ಯೂರಿಟಿ ಮೇಲೆ ಕೀ ಬಂಚ್ನಿಂದ ಹಲ್ಲೆ ಮಾಡಿದ್ದಾರೆ ಎಂದು ರಮೇಶ್ ಗೌಡ ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅವಹೇಳನಕಾರಿ ಪೋಸ್ಟರ್ ಅಂಟಿಸಿ ಸೆಕ್ಯೂರಿಟಿಗೆ ಬೆದರಿಸಿದ ಆರೋಪ ಮೇರೆಗೆ ಶ್ರೀರಾಮಪುರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 448, 504, 324, 506, 149 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಬಿಂದುಗೌಡ A-5, ನವೀನ್ಗೌಡ A-6 ಆರೋಪಿಯಾಗಿದ್ದಾರೆ.