ದೇಶದ ಅತಿದೊಡ್ಡ ಇ – ಕಾಮರ್ಸ್ ಸಂಸ್ಥೆ ಫ್ಲಿಪ್ಕಾರ್ಟ್ ಸ್ಥಾಪಕ ಬಿನ್ನಿ ಬನ್ಸಾಲ್ ಸಂಸ್ಥೆಯ ಆಡಳಿತ ಮಂಡಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. 2007ರಲ್ಲಿ ಗೆಳೆಯ ಸಚಿನ್ ಬನ್ಸಾಲ್ ಜತೆಗೂಡಿ ತಾವು ಸ್ಥಾಪಿಸಿದ್ದ ಸಂಸ್ಥೆಯಿಂದ ಬಿನ್ನಿ ಅಧಿಕೃತವಾಗಿ ಹೊರಬಂದಂತಾಗಿದೆ. 2018ರಲ್ಲಿ ಫ್ಲಿಪ್ ಕಾರ್ಟ್ ಸಂಸ್ಥೆಯ ಬಹುಪಾಲು ಷೇರುಗಳನ್ನು ಅಮೆರಿಕದ ರೀಟೇಲ್ ದಿಗ್ಗಜ ಸಂಸ್ಥೆ ವಾಲ್ಮಾರ್ಟ್ ಖರೀದಿಸಿತ್ತು.
ಬಿನ್ನಿ ಬನ್ಸಾಲ್ ಅವರು ‘ಆಪ್ ಡೋರ್’ ಎನ್ನುವ ಹೊಸ ಸ್ಟಾರ್ಟಪ್ ಸ್ಥಾಪನೆಗೆ ಮುಂದಾಗಿದ್ದಾರೆ. ಅದರ ಬೆನ್ನಲ್ಲೇ ಈ ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ. ‘ಆಪ್ ಡೋರ್’ ಸಹ ಇ – ಕಾಮರ್ಸ್ ಸಂಸ್ಥೆಯಾಗಿದ್ದು, ಅಮೆಜಾನ್ ಮತ್ತು ಎಟ್ಸಿ ಥರದ ಆನ್ಲೈನ್ ಮಾರುಕಟ್ಟೆ ತಾಣಗಳಲ್ಲಿ ಬ್ರ್ಯಾಂಡ್ಗಳು ತಮ್ಮ ವ್ಯವಹಾರಗಳನ್ನು ಯಾವ ರೀತಿ ವೃದ್ಧಿಸಿಕೊಳ್ಳಬಹುದು ಎನ್ನುವುದರ ಬಗ್ಗೆ ಸಂಸ್ಥೆಗಳಿಗೆ ಇದು ವರದಿ ನೀಡುತ್ತದೆ.
ಇ – ಕಾಮರ್ಸ್ ಸಂಸ್ಥೆ ಫ್ಲಿಪ್ಕಾರ್ಟ್ನಲ್ಲಿ ಬಿನ್ನಿ ಬನ್ಸಾಲ್ ಹಾದಿ
* 2007 – ಸಹಪಾಠಿ ಸಚಿನ್ ಬನ್ಸಾಲ್ ಜತೆಗೂಡಿ ಫ್ಲಿಪ್ಕಾರ್ಟ್ ಸ್ಥಾಪನೆ
* 2016 – ಸಚಿನ್ ಬನ್ಸಾಲ್ ನಂತರ ಸಿಇಒ ಸ್ಥಾನಕ್ಕೇರಿದ ಬಿನ್ನಿ ಬನ್ಸಾಲ್
* 2017 – ಬಿನ್ನಿ ಬನ್ಸಾಲ್ಗೆ ಸಂಸ್ಥೆಯ ಸಮೂಹ ಸಿಇಒ ಹುದ್ದೆ
* 2018 – ಅಮೆರಿಕದ ಇ – ಕಾಮರ್ಸ್ ದೈತ್ಯ ಸಂಸ್ಥೆ ವಾಲ್ಮಾರ್ಟ್ನಿಂದ ಶೇ. 77ರಷ್ಟು ಫ್ಲಿಪ್ಕಾರ್ಟ್ ಷೇರು ಖರೀದಿ. ಸಂಸ್ಥೆಗೆ ಸಚಿನ್ ಬನ್ಸಾಲ್ ವಿದಾಯ.