ಮದುವೆ ಮನೆಯಿಂದ ಜನರನ್ನು ಕರೆತರುತ್ತಿದ್ದ ಬಸ್ ಸಿಂಧೂ ನದಿಗೆ ಉರುಳಿದ ಪರಿಣಾಮ 26 ಮಂದಿ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಉತ್ತರ ಗಿಲ್ಗಿಟ್-ಬಾಲ್ಟಿಸ್ತಾನ್ (ಜಿಬಿ) ಪ್ರದೇಶದಲ್ಲಿ ನಡೆದಿದೆ. 28 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಡೈಮರ್ ಜಿಲ್ಲೆಯ ಥಾಲಿಚಿ ಪ್ರದೇಶದಲ್ಲಿ ನದಿಗೆ ಬಿದ್ದಿದೆ ಎಂದು ಹೇಳಿದರು.
ಸ್ಥಳೀಯ ಜನರು ಮತ್ತು ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು ಇಬ್ಬರ ಜೀವ ಉಳಿಸುವಲ್ಲಿ ಯಶಸ್ವಿಯಾದರು. ರಕ್ಷಣಾ ತಂಡ 16 ಮೃತದೇಹಗಳನ್ನು ಮೊದಲು ಹೊರ ತೆಗೆದಿತ್ತು. ಅತಿಥಿಗಳು ಜಿಬಿ ಪ್ರದೇಶದ ಆಸ್ಟರ್ ಪ್ರದೇಶದಿಂದ ಈ ಬಸ್ ಮೂಲಕ ಪೂರ್ವ ಚಕ್ವಾಲ್ ಜಿಲ್ಲೆಗೆ ಹೋಗುತ್ತಿದ್ದರು.
ಘಟನೆಗೆ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ನಾಪತ್ತೆಯಾದವರ ಪತ್ತೆಗೆ ಎಲ್ಲ ರೀತಿಯ ಪ್ರಯತ್ನ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಖೈಬರ್ ಪಖ್ತುಂಕ್ವಾ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ನಲ್ಲಿ ರಸ್ತೆ ಅಪಘಾತಗಳು ಆಗಾಗ ಸಂಭವಿಸುತ್ತಿರುತ್ತವೆ. ಕೆಟ್ಟ ಹವಾಮಾನ, ಕೆಟ್ಟ ರಸ್ತೆಗಳು,. ಓವರ್ಲೋಡ್ ವಾಹನಗಳಿಂದ ಅಪಘಾತ ಸಂಭವಿಸುತ್ತದೆ. ಕಿರಿದಾದ, ಅಂಕುಡೊಂಕಾದ ಮಾರ್ಗಗಳು ಮತ್ತು ಚಾಲಕನ ಆಯಾಸವು ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಈ ಪ್ರದೇಶಗಳನ್ನು ವಿಶೇಷವಾಗಿ ಅಪಘಾತ-ಪೀಡಿತವಾಗಿಸುತ್ತದೆ.