ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಕೊನೆಗೂ ನಿಲ್ಲುವ ಮುನ್ಸೂಚನೆ ಸಿಕ್ಕಿದೆ. ಗಾಜಾ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಕುರಿತ ಕರಡು ಒಪ್ಪಂದವನ್ನು ಹಮಾಸ್ ಒಪ್ಪಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದು ಇಸ್ರೇಲ್ ಸಹ ಒಪ್ಪಂದವನ್ನು ಪರಿಗಣಿಸಲಿದೆ ಎಂದಿದ್ದಾರೆ.
ಸೋಮವಾರವೇ ಕದನ ವಿರಾಮದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಕದನ ವಿರಾಮ ಮಾತುಕತೆಯಲ್ಲಿನ ಪ್ರಗತಿಯನ್ನು ಒಪ್ಪಿಕೊಂಡ ಅಧಿಕಾರಿಗಳು, ಪಶ್ಚಿಮ ಏಷ್ಯಾದ ಬಹುಭಾಗವನ್ನು ಅಸ್ಥಿರಗೊಳಿಸಿರುವ ಈ ಯುದ್ಧವನ್ನು ಕೊನೆಗೊಳಿಸಲು ಮುಂಬರುವ ದಿನಗಳು ನಿರ್ಣಾಯಕವಾಗುತ್ತವೆ ಎಂದು ಹೇಳಿದ್ದರು.
2023ರ ಅಕ್ಟೋಬರ್ 7ರಂದು ಆರಂಭವಾದ ಯುದ್ಧ ಮಾರಣಾಂತಿಕ ದಾಳಿ ಹಾಗೂ ನೂರಾರು ಮಂದಿಯನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿತ್ತು. ನಂತರ ಇಸ್ರೇಲ್ ಗಾಜಾಪಟ್ಟಿ ಮೇಲೆ ದಾಳಿ ಶುರು ಮಾಡಿತ್ತು. ನಂತರ ಹಮಾಸ್ ನ ಪ್ರಮುಖ ಉಗ್ರರನ್ನು ಹತ್ಯೆ ಮಾಡಿದ್ದ ಇಸ್ರೇಲ್ ಹಮಾಸ್ ನ ಆರ್ಥಿಕ ಮೂಲಗಳ ಬೇರುಗಳನ್ನು ನಾಶಪಡಿಸಿತ್ತು. ನಂತರ ಕದನ ವಿರಾಮ ಕುರಿತಂತೆ ಮಾತುಕತೆಗಳು ಶುರುವಾಗಿದ್ದವು. ಇದೀಗ ಕದನ ವಿರಾಮಕ್ಕೆ ಹಮಾಸ್ ಮುಂದಾಗಿದೆ.
ಕರಡು ಒಪ್ಪಂದದ ಯೋಜನೆಯನ್ನು ಅಂತಿಮ ಅಂಗೀಕಾರಕ್ಕೆ ಇಸ್ರೇಲ್ ಸಂಪುಟದ ಎದುರು ಮಂಡಿಸಲಾಗುವುದು ಎಂದು ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ. ನಡೆಯುತ್ತಿರುವ ಮಾತುಕತೆಗಳು ಸಕಾರಾತ್ಮಕ ಮತ್ತು ಫಲಪ್ರದವಾಗಿದ್ದು ಇಂದು ನಾವು ಒಪ್ಪಂದ ಪೂರ್ಣಗೊಳ್ಳುವ ನಿಕಟ ಹಂತದಲ್ಲಿದ್ದೇವೆ ಎಂದು ಖತರ್ ವಿದೇಶಾಂಗ ಇಲಾಖೆಯ ವಕ್ತಾರ ಮಜೀದ್ ಅಲ್-ಅನ್ಸಾರಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ನಡೆಯುತ್ತಿರುವ ಮಾತುಕತೆ ಅಂತಿಮ ಹಂತ ತಲುಪಿದೆ ಎಂದು ಹಮಾಸ್ ನಾಯಕರು ಹೇಳಿದ್ದಾರೆ.