ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸಲಿರುವ ಕಾಂತಾರ ಚಾಪ್ಟರ್ 1 (Kantara 1) ಸಿನಿಮಾಗೆ ಕಲಾವಿದರು (Artists) ಬೇಕಾಗಿದ್ದಾರೆ ಎಂದು ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿತ್ತು. ಹಲವಾರು ಪಾತ್ರಗಳು ಇರುವುದರಿಂದ ಕಲಾವಿದರ ವಯಸ್ಸನ್ನೂ ನಿಗದಿ ಪಡಿಸಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ಸಾಕಷ್ಟು ರೆಸ್ಪಾನ್ಸ್ ಬಂದಿದೆ. ಚಿತ್ರತಂಡವೇ ಹೇಳಿಕೊಂಡಂತೆ 25 ಸಾವಿರಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ.
ರಿಕ್ ಪಾರ್ಟಿ ಮಾಡಿದಾಗಲೂ ಆಡಿಷನ್ ಗೆ ಚಿತ್ರತಂಡ ಕಾಲ್ ಮಾಡಿತ್ತು. ಆಗ ಎರಡು ಸಾವಿರಕ್ಕೂ ಹೆಚ್ಚು ಕಲಾವಿದರು ಅರ್ಜಿ ಸಲ್ಲಿಸಿದ್ದರು. ಕಾಂತಾರ 1 ಚಿತ್ರಕ್ಕೆ ನಿರೀಕ್ಷೆಗೂ ಮೀರಿ ಜನರು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಚಿತ್ರತಂಡವು ಅದನ್ನು ಪರಿಶೀಲಿಸುವ ಕೆಲಸವನ್ನು ನಡೆಸಿದೆ. ಸಾಮಾನ್ಯ ಕಲಾವಿದರು ಮಾತ್ರವಲ್ಲ, ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ನಾಯಕಿಯರು ಅವಕಾಶ ಕೇಳಿದ್ದಾರೆ ಎನ್ನವುದು ವಿಶೇಷ.
ಕಾಂತಾರ ಸಿನಿಮಾದಲ್ಲಿ ನಟಿಸೋಕೆ ಆಸೆ ಇರುವುದಾಗಿ ಪಾಯಲ್ ರಜಪೂತ್ (Payal Rajput) ಮತ್ತು ಕನ್ನಡದ ನಟಿ ಕಾರುಣ್ಯ ರಾಮ್ (Karunya Ram) ಕೂಡ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಆಸೆಯನ್ನು ವ್ಯಕ್ತಪಡಿಸಿರುವ ಕಾರುಣ್ಯ ರಾಮ್, ನನಗೂ ಕಾಂತಾರ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿ ಎಂದು ಅವರು ಕೇಳಿಕೊಂಡಿದ್ದರು.